ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಆರೆಸ್ಸೆಸ್‌ಗೆ ಸೇರಿ ಎನ್ನುವುದು ಖಂಡನಾರ್ಹ: ಸಚಿವ ಮಹದೇವಪ್ಪ

Update: 2024-07-23 15:23 GMT

PC : x/@CMahadevappa

ಬೆಂಗಳೂರು : ‘ಮನುವಾದಿಗಳನ್ನು ಮೆಚ್ಚಿಸಲು ಸರಕಾರಿ ನೌಕರರು  ರಾಷ್ಟ್ರೀಯ ಸ್ವಯಸೇವಕ ಸಂಘ(ಆರೆಸ್ಸೆಸ್‌)ದ ಶಾಖೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳುತ್ತಿರುವ ಕೇಂದ್ರ ಸರಕಾರದ ನಿಲುವು, ಅತ್ಯಂತ ಅಪಾಯಕಾರಿ ನಡೆಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಸಿ.ಮಹದೇವಪ್ಪ ತಿಳಿಸಿದ್ದಾರೆ.

ಮಂಗಳವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಸರಕಾರ ಎಂಬುದು ಸದಾ ನ್ಯಾಯ ಪ್ರಜ್ಞೆಯನ್ನು ಇಟ್ಟುಕೊಂಡು ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ ಪ್ರಜಾಪ್ರಭುತ್ವದ ಆಶಯಕ್ಕೆ ಅನುಸಾರವಾಗಿ ಕೆಲಸ ಮಾಡಬೇಕು. ಸರಕಾರದ ಭಾಗವಾಗಿ ಕೆಲಸ ಮಾಡುವ ಸರಕಾರಿ ನೌಕರರೂ ಪ್ರಜಾಪ್ರಭುತ್ವದ ಈ ಪ್ರಕ್ರಿಯೆಯ ಭಾಗವಾಗಿರುತ್ತಾರೆʼ ಎಂದು ಹೇಳಿದ್ದಾರೆ.

‘ಹೀಗಿರುವಾಗ ನೀವು ಇಂತದ್ದೇ ತಿನ್ನಬೇಕು, ಇಂತಹದ್ದೇ ಉಡುಪು ಧರಿಸಬೇಕು, ಹೀಗೇ ಬದುಕಬೇಕು ಮತ್ತು ನಾವು ಹೇಳುವ ರೀತಿಯಲ್ಲೇ ಬದುಕಬೇಕು ಎಂದು ಮೂಢನಂಬಿಕೆ ಮತ್ತು ಅವೈಜ್ಞಾನಿಕತೆಯನ್ನೆ ಉಸಿರಾಡುವ ಆರೆಸ್ಸೆಸ್ ಚಟುವಟಿಕೆಗಳಲ್ಲಿ, ತಟಸ್ತವಾಗಿ, ಯಾವುದೇ ಸಾಮಾಜಿಕ ಮತ್ತು ಸೈದ್ಧಾಂತಿಕ ಪೂರ್ವಾಗ್ರಹ ಇಲ್ಲದೆ ಕೆಲಸ ಮಾಡುವ ಸಂವಿಧಾನಿಕ ಜವಾಬ್ದಾರಿ ಹೊತ್ತಿರುವ ಸರಕಾರಿ ನೌಕರರು ಭಾಗವಹಿಸುವುದು ಯಾವ ರೀತಿಯಲ್ಲೂ ಸರಿಯಲ್ಲ’ ಎಂದು ಅವರು ಆಕ್ಷೇಪಿಸಿದ್ದಾರೆ.

‘ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ಆಳವಾಗಿ ಅಳವಡಿಸಿಕೊಂಡು, ಎಲ್ಲರನ್ನೂ ಕಾಪಾಡುವ ಸಂವಿಧಾನದ ರೀತಿ ನೀತಿಗಳನ್ನು ಗಾಳಿಗೆ ತೂರಿ ಜೀವಿಸಲು ಇಚ್ಛಿಸುವ ಆರೆಸ್ಸೆಸ್‌ ನೊಳಗೆ, ಸಂವಿಧಾನದ ಸೇವಕರಾಗಿ ಕೆಲಸ ಮಾಡುವ ನೌಕರರು ಭಾಗವಹಿಸುವುದು ಸರಿಯಲ್ಲ. ಕೇಂದ್ರ ಸರಕಾರ ತಮ್ಮ ಈ ನಿರ್ಧಾರವನ್ನು ರದ್ದುಪಡಿಸಬೇಕು’ ಎಂದು ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News