ಸಾಮಾಜಿಕ ನ್ಯಾಯ ಒದಗಿಸಲು ಐಎಎಸ್ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು : ಸಚಿವ ಮಹದೇವಪ್ಪ

Update: 2024-10-27 13:18 GMT

ಬೆಂಗಳೂರು : ಚುನಾವಣೆಯಿಂದ ಚುನಾವಣೆಗೆ ಬದಲಾಗುವ ರಾಜಕೀಯ ನಾಯಕರ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ದೇಶ ನಿರ್ಮಾಣದಲ್ಲಿ ಐಎಎಸ್ ಅಧಿಕಾರಿಗಳ ಪಾತ್ರವು ಅಧಿಕವಾಗಿದ್ದು, ಅವರು ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೆಚ್ಚು ಬದ್ಧತೆಯಿಂದ ಕೆಲಸ ಮಾಡುವುದು ಒಳಿತು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ರವಿವಾರ ವಿಧಾನಸೌಧದಲ್ಲಿ ಜರುಗಿದ 2024-25ನೇ ಸಾಲಿನ ಎಸ್ಸಿಎಸ್ಪಿ-ಟಿಎಸ್ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೋಡಲ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಐತಿಹಾಸಿಕ ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆಯನ್ನು ಜಾರಿಗೊಳಿಸಿದ ಬಳಿಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಸಮುದಾಯಗಳ ಏಳಿಗೆಯ ನಿಟ್ಟಿನಲ್ಲಿ ಸಾಕಷ್ಟು ಆಶಯಗಳನ್ನು ಹೊಂದಲಾಗಿದೆ ಎಂದು ಹೇಳಿದರು.

ಸರಕಾರದ ಅಡಿಯಲ್ಲಿ ಬರುವ ಎಲ್ಲ ಇಲಾಖೆಗಳಿಗೂ ಹಂಚಿಕೆಯಾಗಿರುವ ಎಸ್ಸಿಎಸ್ಪಿ-ಟಿಎಸ್ಪಿ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡು ಪರಿಶಿಷ್ಟ ವರ್ಗಗಳ ಬದುಕಿಗೆ ನೆರವಾಗಬೇಕು ಮತ್ತು ಆ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕೆಂದು ನೋಡಲ್ ಅಧಿಕಾರಿಗಳಿಗೆ ಮಹದೇವಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದರು.

2024ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ನೀಡಲಾದ ಎಸ್ಸಿಎಸ್ಪಿ-ಟಿಎಸ್ಪಿ ಅನುದಾನ ಹಂಚಿಕೆ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಶೇ.87ರಷ್ಟು ಅನುದಾನ ಬಳಕೆ ಆಗಿದ್ದು, ಪರಿಶಿಷ್ಟ ವರ್ಗಗಳಿಗೆ ಶೇ.83ರಷ್ಟು ಅನುದಾನದ ಬಳಕೆಯಾಗಿದೆ. ಪರಿಶಿಷ್ಟ ಸಮುದಾಯಗಳಲ್ಲಿ ಧನಾತ್ಮಕ ಬದಲಾವಣೆಯ ಸೂಚನೆಗಳು ಸಿಗುತ್ತಿವೆ ಎಂದು ಅವರು ಹೇಳಿದರು.

ಇನ್ನು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪ್ರವಾಸೋದ್ಯಮ ಇಲಾಖೆಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಡಿಯಲ್ಲಿ ಈ ಬಾರಿ ಪರಿಶಿಷ್ಟ ಸಮುದಾಯದ ಪತ್ರಕರ್ತರಿಗೆ ಮಾಧ್ಯಮ ಕಿಟ್ ಗಳನ್ನು ಕೊಡುವ ಬಗ್ಗೆಯೂ ಚರ್ಚಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಎಸ್ಸಿಎಸ್ಪಿ-ಟಿಎಸ್ಪಿ ಅನುದಾನದ ಬಳಕೆಯು ಈ ವರ್ಷದಲ್ಲಿ ಗಣನೀಯವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಮಾನ್ಯ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್, ಆಯುಕ್ತರು ಮತ್ತು ವಿವಿಧ ಇಲಾಖೆಗಳ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News