ಬಾಗ್ಮನೆ ಸಂಸ್ಥೆ ಮತ್ತು ನಮ್ಮ ಕುಟುಂಬದ ಒಡನಾಟಕ್ಕೂ, ಸರಕಾರದ ತೀರ್ಮಾನಕ್ಕೂ ಸಂಬಂಧವಿಲ್ಲ : ಸಚಿವ ಎಂ.ಬಿ.ಪಾಟೀಲ್‌

Update: 2024-09-04 13:06 GMT

ಬೆಂಗಳೂರು : "ಬಾಗ್ಮನೆ ಸಂಸ್ಥೆ ಮತ್ತು ನಮ್ಮ ಕುಟುಂಬದ ಒಡನಾಟಕ್ಕೂ ಸರಕಾರದ ತೀರ್ಮಾನಕ್ಕೂ ಯಾವ ಸಂಬಂಧವೂ ಇಲ್ಲ" ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ಬುಧವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಬಿಜೆಪಿಯ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

"ನಾನು ಬಾಗ್ಮನೆಯಿಂದ 4 ಕೋಟಿ ರೂ. ಸಾಲ ತೆಗೆದುಕೊಂಡಿದ್ದು 2001ರಲ್ಲಿ, ನೀವು ಬೊಬ್ಬೆ ಹೊಡೆಯುತ್ತಿರುವಂತೆ 2023ರಲ್ಲೂ ಅಲ್ಲ, ಚುನಾವಣೆ ಖರ್ಚಿಗಾಗಿಯೂ ಅಲ್ಲ. ಅವೆಲ್ಲ ನಮ್ಮ ಕೌಟುಂಬಿಕ ವ್ಯವಹಾರ. ಅನೇಕ ಸಲ ಸಾಲ ಪಡೆದು, ವಾಪಸ್ ಕೂಡ ಕೊಟ್ಟಿದ್ದೇನೆ. ಬಾಕಿಯೂ ಇದೆ. ಬಿಜೆಪಿಯವರ ಆರೋಪಗಳು ಸತ್ಯಕ್ಕೆ ದೂರವಾದದ್ದು ಹಾಗೂ ಕುಚೇಷ್ಟೆ ಮತ್ತು ದುರುದ್ದೇಶದಿಂದ ಕೂಡಿವೆ” ಎಂದು ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ʼಬಾಗ್ಮನೆ ಸಂಸ್ಥೆ ಮತ್ತು ನಮ್ಮ ಕುಟುಂಬದ ಒಡನಾಟಕ್ಕೂ ಸರಕಾರದ ತೀರ್ಮಾನಕ್ಕೂ ಯಾವ ಸಂಬಂಧವೂ ಇಲ್ಲ. 2021ರಲ್ಲಿ ಬಿಜೆಪಿ ಸರಕಾರವೇ ತನ್ನ ಆದೇಶದಲ್ಲಿ ನಿಗದಿಪಡಿಸಿದ್ದ ಹಂಚಿಕೆ ದರವನ್ನೇ ವಿಧಿಸಲಾಗಿದೆ. ಇದರಲ್ಲಿ ಯಾವುದೇ ರಿಯಾಯಿತಿ ನೀಡಿಲ್ಲʼ ಎಂದು ಸ್ಪಷ್ಟಪಡಿಸಿದರು.

ನಿವೇಶನ ಹಂಚಿಕೆಗೆ ಪರಿಗಣಿಸುವ ಮಾನದಂಡ ಸಂಸ್ಥೆಯ ಅರ್ಹತೆ, ಸಾಮರ್ಥ್ಯ, ಅನುಭವ ಇತ್ಯಾದಿಯೇ ಹೊರತು ವ್ಯಕ್ತಿ ನಿಷ್ಟ ಮಾನದಂಡಗಳಲ್ಲ. ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳನ್ನು ಒಳಗೊಂಡ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯ ಸಾಮೂಹಿಕ ಹಾಗೂ ಒಮ್ಮತದ ತೀರ್ಮಾನವೇ ಹೊರತು ವೈಯಕ್ತಿಕ ನಿರ್ಧಾರವಲ್ಲ ಎಂದು ತಿಳಿಸಿದ್ದಾರೆ.

ಚುನಾವಣಾ ಅಫಿಡವಿಟ್‍ನಲ್ಲಿ ಬಹಿರಂಗ : ‘ಚುನಾವಣೆ ವೆಚ್ಚಕ್ಕೆಂದು ಬಾಗ್ಮನೆ ಡೆವಲಪರ್ಸ್‍ನಿಂದ ಸಚಿವ ಎಂ.ಬಿ.ಪಾಟೀಲ್ 4ಕೋಟಿ ರೂ. ಪಡೆದಿರುವುದು ಅವರ ಚುನಾವಣಾ ಅಫಿಡವಿಟ್‍ನಲ್ಲಿಯೆ ಬಹಿರಂಗವಾಗಿದೆ. ಚುನಾವಣೆ ಮುಗಿದ ತತಕ್ಷಣ ಬಾಗ್ಮನೆ ಡೆವಲಪರ್ಸ್‍ನ ಪಾಲುದಾರರ ಮತ್ತೊಂದು ಕಂಪನಿಯಾದ ವೈಗೈ ಇನ್ವೆಸ್ಟ್‍ಮೆಂಟ್ ಪ್ರೈ.ಲಿ ಗೆ ಬೆಂಗಳೂರಿನ ಡಿಫೆನ್ಸ್ ಎಸ್‍ಇಝಡ್ ಪಾರ್ಕ್‍ನಲ್ಲಿ ಅಂದಾಜು 160ಕೋಟಿ ರೂ.ಬೆಲೆಬಾಳುವ 8 ಎಕರೆ ಭೂಮಿ ನೀಡಲಾಗಿದೆ ಎಂದು ಬಿಜೆಪಿ ದೂರಿದೆ.

ಬುಧವಾರ ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ‘ವೈಗೈ ಇನ್ವೆಸ್ಟ್‍ಮೆಂಟ್ ಪ್ರೈ.ಲಿಗೆ ಭೂಮಿ ನೀಡಿದ್ದು ತಮ್ಮ ಸಾಲದ ಋಣಬಾಬತ್ತನ್ನು ತೀರಿಸಲೋ ಅಥವಾ ಅದರಲ್ಲಿಯೂ ವಸೂಲಿಬಾಜಿ ನಡೆದಿದೆಯೋ ಎಂಬುದನ್ನು ಟಕಾಟಕ್ ಎಂದು ಭೂಮಿ ಮಂಜೂರು ಮಾಡಿರುವ ಎಂ.ಬಿ.ಪಾಟೀಲರೇ ತಿಳಿಸಬೇಕು’ ಎಂದು ಆಗ್ರಹಿಸಿತ್ತು.

ಅಲ್ಲದೆ, ಬಾಗ್ಮನೆಗೆ 2005, 2006 ಮತ್ತು 2009ರಲ್ಲೆಲ್ಲ ಅಂದಂದಿನ ಸರಕಾರಗಳು ಕೈಗಾರಿಕಾ ಭೂಮಿ ನೀಡಿವೆ. 2009ರಲ್ಲಿ ಇದೇ ಬಾಗ್ಮನೆ ಸಮೂಹದ ಚಂದ್ರಾ ಡೆವಲಪರ್ಸ್ ಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 25 ಎಕರೆ ಭೂಮಿ ನೀಡಿದ್ದಾಗ ನಿಮ್ಮದೇ ಸರ್ಕಾರ ಇತ್ತಲ್ಲವೇ? ಎಂದು ಎಂ.ಬಿ.ಪಾಟೀಲ್‌ ಪ್ರಶ್ನಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News