‘ಗ್ರಾಮಸಭೆ’ಗೆ ಮಾರ್ಗಸೂಚಿ ಬಿಡುಗಡೆ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಗ್ರಾಮ ಪಂಚಾಯತಿಗಳು ಜನವಸತಿ ಸಭೆ, ವಾರ್ಡ್ ಸಭೆ ಹಾಗೂ ಗ್ರಾಮಸಭೆಗಳನ್ನು ನಡೆಸುವುದು ಕಡ್ಡಾಯವಾಗಿದ್ದು, ಈ ಸಂಬಂಧದಲ್ಲಿ ಕಾರ್ಯಾಚರಣೆ ವಿಧಾನದ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಅನುಷ್ಠಾನ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆಗಾಗಿ ಗ್ರಾಮ ಪಂಚಾಯತಿಗಳು ಸಭೆಗಳನ್ನು ನಡೆಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.
ಗ್ರಾಮಸಭೆ ಸೇರುವ ಒಂದು ತಿಂಗಳು ಮೊದಲೇ ಜನವಸತಿ ಸಭೆ ಹಾಗೂ ವಾರ್ಡ್ ಸಭೆಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು ನಡೆಸಬೇಕು, ಒಂದು ವರ್ಷದಲ್ಲಿ ಎರಡು ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು ಎಂಬ ಮಾಹಿತಿ ಮಾರ್ಗಸೂಚಿಗಳಲ್ಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪ್ರತಿ ಆರ್ಥಿಕ ವರ್ಷದಲ್ಲಿ ಜನವರಿ 26, ಎಪ್ರಿಲ್ 24, ಆಗಸ್ಟ್ 15 ಮತ್ತು ಅಕ್ಟೋಬರ್ 2ರಂದು ಕಡ್ಡಾಯವಾಗಿ ಗ್ರಾಮ ಸಭೆಗಳನ್ನು ಆಯೋಜಿಸಲು ಸೂಚಿಸಲಾಗಿದೆ, ಒಂದು ವರ್ಷದಲ್ಲಿ ಒಂದು ವಿಶೇಷ ಮಹಿಳಾ ಗ್ರಾಮಸಭೆ ಮತ್ತು ಒಂದು ಮಕ್ಕಳ ಗ್ರಾಮಸಭೆಯನ್ನು ಆಯೋಜಿಸಲು ಮಾರ್ಗದರ್ಶನ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಭೆಗಳನ್ನು ಕರೆಯುವ ವಿಧಾನ, ಸಭೆಗಳಲ್ಲಿ ಪಾಲ್ಗೊಳ್ಳ ಬೇಕಾದ ಇಲಾಖಾ ಅಧಿಕಾರಿಗಳು-ನೌಕರರ ವಿವರಗಳನ್ನು ಈ ಮಾರ್ಗಸೂಚಿ ಹೊಂದಿದೆ. ಗ್ರಾಮ ಪಂಚಾಯತಿ ಪ್ರದೇಶದಲ್ಲಿ ಜವಾಬ್ದಾರಿ ನಕ್ಷೆಯನುಸಾರ ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಆದ್ಯತೆಯ ನಿರ್ಧಾರ, ಪಡಿತರ ವಿತರಣೆ, ವೃದ್ದಾಪ್ಯ ವೇತನ, ವಿಶೇಷ ಚೇತನರ ವೇತನ, ವಿಧವಾ ವೇತನ ಹಾಗೂ ಇನ್ನಿತರೆ ಸಾಮಾಜಿಕ ಭದ್ರತಾ ಯೋಜನೆಗಳ ವಿವರ ಸಂಗ್ರಸಿಬೇಕು ಎಂದು ಅವರು ತಿಳಿಸಿದ್ದಾರೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ತಂದ ಬಗ್ಗೆ ಚರ್ಚೆ, ಆಸ್ಪತ್ರೆ ಹಾಗೂ ಪಶುವೈದ್ಯ ಶಾಲೆಗಳ ಚಟುವಟಿಕೆಗಳ ಮಾಹಿತಿ, ಜನರ ಹಾಗೂ ಜಾನುವಾರುಗಳ ಆರೋಗ್ಯದ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ನೀರು ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸಲು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯಿಂದ ಗ್ರಾಮಕ್ಕೆ ಮಾಡಿದ ವೆಚ್ಚ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶೌಚಾಲಯಗಳ ನಿರ್ಮಾಣ ಮಾಹಿತಿ, ಸಹಾಯಧನ ನೀಡಿರುವ ವಿವರ, ಅಂಗನವಾಡಿ ಕೇಂದ್ರದ ಚಟುವಟಿಕೆಗಳ ಬಗ್ಗೆ ಚರ್ಚೆ, ಗ್ರಾಮ ಪಂಚಾಯತಿಯ ವಿವಿಧ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಗ್ರಾಮದ ಫಲಾನುಭವಿಗಳ ಆಯ್ಕೆ ಮಾಡಲು ಗ್ರಾಮ ಸಭೆಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಗ್ರಾಮ ಸಭೆಗಳು ಸಹಾಯಕವಾಗಿದ್ದು ಗ್ರಾಮಗಳನ್ನು ಬಲಯುತಗೊಳಿಸಲು ಸಹಾಯಕವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗ್ರಾಮ ಸಭೆಗಳನ್ನು ಆಯೋಜಿಸುವ ಸಂಬಂಧ ತಾಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನೂ ಈ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ ಎಂದು ತಿಳಿಸಿರುವ ಅವರು, ತಾಲೂಕು ಪಂಚಾಯತಿಗಳ ಕಾರ್ಯಾನಿರ್ವಾಹಕ ಅಧಿಕಾರಿಗಳು ತಮ್ಮ ಜವಾಬ್ದಾರಿಯಲ್ಲಿ ಲೋಪವಾಗದಂತೆ ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆ.
ಗ್ರಾಮಸಭೆಗಳನ್ನು ನಡೆಸುವಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ ಅತಿ ಮುಖ್ಯವಾಗಿದ್ದು, ಜನವಸತಿ, ವಾರ್ಡ್ ಸಭೆ ಹಾಗೂ ಗ್ರಾಮಸಭೆಗಳಲ್ಲಿ ಹೆಚ್ಚು ಮಂದಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಬೇಕು, ಗ್ರಾಮ ಪಂಚಾಯತಿಗಳು ಸ್ಥಳೀಯ ಸರಕಾರಗಳಾಗಿ ಕಾರ್ಯ ನಿರ್ವಹಿಸುವ ಮೂಲಕ ಸರಕಾರದ ಕಲ್ಯಾಣ ಯೋಜನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಬಡ ಮತ್ತು ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ನಿರ್ದೇಶನ ನೀಡಿದ್ದಾರೆ.