ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕಟ್ಟುನಿಟ್ಟಿನ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

ಸರಿಯಾದ ಉತ್ತರ ನೀಡಲು ಹಾಗೂ ದಾಖಲೆ ಒದಗಿಸಲು ವಿಫಲವಾದ ಅಧಿಕಾರಿಗಳ ವಿರುದ್ದ ಹರಿಹಾಯ್ದ ಸಚಿವ ಪ್ರಿಯಾಂಕ್ ಖರ್ಗೆ, ಯೋಜನೆ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಸುಮ್ಮನೇ ಸರ್ಕಾರಿ ದ್ರಾಕ್ಷಿ, ಗೋಡಂಬಿ ತಿಂದು ಹೋಗಲು ಬಂದಿದ್ದೀರಾ. ಎಲ್ಲಿ ಬೇಕೆಂದರಲ್ಲಿ ನೆಲವನ್ನು ಅಗೆದು ಅದನ್ನು ಮುಚ್ಚಿ ಮರಳಿ ಡಾಂಬರೀಕರಣ ಮಾಡಿಲ್ಲ. ಜನರಿಗೆ ತೊಂದರೆಯಾಗುತ್ತಿರುವುದು ನೀವೆಲ್ಲ ಗಮನಿಸಿಲ್ಲವೇ? ಎಂದು ಖಾರವಾಗಿಯೇ ಪ್ರಶ್ನಿಸಿದರು.

Update: 2023-07-08 10:24 GMT

ಕಲಬುರಗಿ: ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಾನಗರ ಪಾಲಿಕೆ, ನಗರಾಭಿವೃದ್ದಿ ಇಲಾಖೆ ಹಾಗೂ ಕರ್ನಾಟಕ ನಗರ ಕುಡಿಯುವ ನೀರು ಸರಬರಾಜು ಮಂಡಳಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದ ಅವರು, ಕಲಬುರಗಿ ಮಹಾನಗರಕ್ಕೆ 24 ಗಂಟೆ ನಿರಂತರ ಕುಡಿಯುವ ನೀರು ಒದಗಿಸುವ ಯೋಜನೆ ಕುಂಟುತ್ತಾ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕೂಡಲೆ 15 ದಿನದಲ್ಲಿ ಕಾರ್ಮಿಕರ ಸಂಖ್ಯೆ ದ್ವಿಗುಣಗೊಳಿಸಿ ಕಾಮಗಾರಿ ಮಿಷನ್ ಮೋಡ್ ನಲ್ಲಿ ಪೂರ್ಣಗೊಳಿಸಬೇಕು. 24x7 ಕುಡಿಯುವ ನೀರಿನ ಕಾಮಗಾರಿಯನ್ನು ನಿಧಾನಗತಿ ಸಹಿಸುವುದಿಲ್ಲ. ಎಲ್.& ಟಿ ಕಂಪನಿ ಇದನ್ನು ಸರಿಯಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ಕಾರ್ಮಿಕ ಸಂಖ್ಯೆ ಹೆಚ್ಚಿಸಬೇಕು. ಇನ್ನು ಈ ಕಾಮಗಾರಿ ಕುರಿತು ಪ್ರತಿ ವಾರ ಖುದ್ದಾಗಿ ಪರಿಶೀಲಿಸಿ ವರದಿ ನೀಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಅವರಿಗೆ ಸೂಚಿಸಿದರು.

ಒಡೆದು ಸೋರುತ್ತಿರುವ ಪೈಪ್ ಲೈನ್ ಗಳ ಬದಲಾವಣೆಗೆ ತ್ವರಿತಗತಿ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಕಲುಷಿತ ನೀರು ಸರಬರಾಜು ಆಗುವುದನ್ನು ತಡೆಯಬಹುದು. ಹೊಸ ಪೈಪ್ ಲೈನ್ ಅಳವಡಿಕೆಗೆ ಯಾಕೆ ನಾಲ್ಕು ದಿನ ಬೇಕು ? ಅಗತ್ಯವಿರುವಷ್ಟು ಸಿಬ್ಬಂದಿಯನ್ನು ಕೂಡಲೇ ನೇಮಿಸಿಕೊಂಡು ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಖರ್ಗೆ ಆದೇಶಿಸಿದರು.

ಕರ್ನಾಟಕ ನಗರ ಕುಡಿಯುವ ನೀರು ಯೋಜನೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಕಾಂತರಾಜ್ ಹಾಗೂ ಎಲ್ ಅಂಡ್ ಟಿ ಕಂಪನಿಯ ಅಧಿಕಾರಿ ಸಂಜಯ್ ಅವರು ಪೈಪ್ ಲೈನ್ ಗಾಗಿ ನೆಲ ಅಗೆದು ಹಾಗೆಯೇ ಬಿಟ್ಟಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ, ಟೆಕ್ಸ್ ಮೊ ಕಂಪನಿಯ ಎಚ್ ಡಿಪಿ ಪೈಪ್ ನ ಸಾಮರ್ಥ್ಯದ ಬಗ್ಗೆ ಮೈಸೂರಿನ ಸಿಪೆಟ್ ಸಂಸ್ಥೆಯು ವರದಿ ನೀಡಿದ್ದು, ಉತ್ತಮ ಗುಣಮಟ್ಟ ಹೊಂದಿಲ್ಲ ಎಂದಿದೆ. ಆದರೂ ಅದೇ ಕಂಪನಿಯ ಪೈಪ್ ಅಳವಡಿಸಿದ್ದೇಕೆ ? ಈ ಕುರಿತಾದ ಸೆಪೆಟ್ ವರದಿಗಳು ನಿಮ್ಮ ಬಳಿ ಇವೆಯಾ? ಎಂದು ಪ್ರಶ್ನಿಸಿದರು.

ಸರಿಯಾದ ಉತ್ತರ ನೀಡಲು ಹಾಗೂ ದಾಖಲೆ ಒದಗಿಸಲು ವಿಫಲವಾದ ಅಧಿಕಾರಿಗಳ ವಿರುದ್ದ ಹರಿಹಾಯ್ದ ಖರ್ಗೆ, ಯೋಜನೆ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಸುಮ್ಮನೇ ಸರ್ಕಾರಿ ದ್ರಾಕ್ಷಿ, ಗೋಡಂಬಿ ತಿಂದು ಹೋಗಲು ಬಂದಿದ್ದೀರಾ. ಎಲ್ಲಿ ಬೇಕೆಂದರಲ್ಲಿ ನೆಲವನ್ನು ಅಗೆದು ಅದನ್ನು ಮುಚ್ಚಿ ಮರಳಿ ಡಾಂಬರೀಕರಣ ಮಾಡಿಲ್ಲ. ಜನರಿಗೆ ತೊಂದರೆಯಾಗುತ್ತಿರುವುದು ನೀವೆಲ್ಲ ಗಮನಿಸಿಲ್ಲವೇ? ಎಂದು ಖಾರವಾಗಿಯೇ ಪ್ರಶ್ನಿಸಿದರು.

ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, ಕಮೀಷನರ್ ಭುವನೇಶ ಪಾಟೀಲ ಕುರಿತು, ಮಹಾನಗರ ಪಾಲಿಕೆ ಆಯುಕ್ತರಾಗಿರುವ ನೀವು ಅಧಿಕಾರಿಗಳು ಯಾಕೆ ಕೆಲಸ ಮಾಡುತ್ತಿಲ್ಲ ಗೊತ್ತಿಲ್ಲ ಎಂದರೆ ಹೇಗೆ ? ನಿಮಗೆ ಸರ್ಕಾರ ಎಲ್ಲ ಸವಲತ್ತು ನೀಡಿದೆ. ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಯಾರು ಸರಿಯಾಗಿ ಕೆಲಸ ಮಾಡುವುದಿಲ್ಲ ಅಂತವರ ವಿರುದ್ದ ಕ್ರಮ ಕೈಗೊಳ್ಳಿ. ಕಷ್ಟಪಟ್ಟು ವಿಶ್ವಬ್ಯಾಂಕ್ ನಿಂದ ಸಾಲ ತಂದರೆ ಸಮರ್ಪಕ ಕುಡಿಯುವ ನೀರಿನ ಯೋಜನೆ ಜಾರಿ ಮಾಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.

700 ಕಾರ್ಮಿಕರ ಬದಲಾಗಿ 300 ಕಾರ್ಮಿಕರಿಂದ ಕುಡಿಯುವ ನೀರು ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯ ನಿಧಾನಗತಿಗೆ ಕಾರಣ ಕೇಳಿ ಕೂಡಲೇ ಎಲ್ & ಟಿ ಕಂಪನಿಗೆ ನೋಟಿಸ್ ನೀಡಬೇಕು.ಕಾಮಗಾರಿ ವೇಗ ಪಡೆದುಕೊಳ್ಳದಿದ್ದಲ್ಲಿ ಎಲ್ & ಟಿ ಕಂಪನಿಯಿಂದ ಗುತ್ತಿಗೆ ಹಿಂಪಡೆದು ಬೇರೆಯವರಿಗೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ ಮಾತನಾಡಿ ಸಾರ್ವಜನಿಕರ ಸಮಸ್ಯೆ ನಿವಾರಿಸಲು ಎಲ್ & ಟಿ ಸ್ಪಂದನಾ ತಂಡ ರಚಿಸಬೇಕು. ಪ್ರಸ್ತುತ ಮಳೆಗಾಲವಾದ್ದರಿಂದ ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. ಕಾಮಗಾರಿ ಪ್ರಗತಿ ಕುರಿತು ಸ್ಥಳೀಯ ಶಾಸಕರೊಂದಿಗೆ ಹಂಚಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಲಬುರಗಿ ಉತ್ತರ ಹಾಗೂ ದಕ್ಷಿಣ ವಿಧಾನಸಭೆ ವ್ಯಾಪ್ತಿಯ ವಾರ್ಡುಗಳಲ್ಲಿ ವಾರಕ್ಕೊಮ್ಮೆ ರಾಡಿ ಮಿಶ್ರಿತ ಹಾಗೂ ಹುಳುಗಳು ಇರುವ ಕುಡಿಯುವ ನೀರು ಸರಬರಾಜಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸುತ್ತಿದ್ದು ಈ ಕುರಿತು ಕಮಿಷನರ್ ಗಮನಕ್ಕೆ ತರಲಾಗಿದೆ ಎಂದು ಶಾಸಕರಾದ ಅಲ್ಲಮಪ್ರಭು ಪಾಟೀಲ ಹಾಗೂ ಕನೀಜ್ ಫಾತಿಮಾ ಸಭೆಯಲ್ಲಿ ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ಎಂ.ರಾಚಪ್ಪ, ಮಹಾನಗರ ಪಾಲಿಕೆ ಕಮೀಷನರ್ ಭುವನೇಶ್ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News