ಹೈಕೋರ್ಟ್ ತೀರ್ಪು ರಾಜಕೀಯ ಪ್ರೇರಿತ ಎಂದಿಲ್ಲ : ಸಚಿವ ಝಮೀರ್ ಅಹ್ಮದ್ ಸ್ಪಷ್ಟನೆ

Update: 2024-09-26 15:13 GMT

ಬೆಂಗಳೂರು: ‘ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ರಾಜಕೀಯ ಪ್ರೇರಿತ ಎಂಬ ಅರ್ಥದಲ್ಲಿ ನಾನು ಹೇಳಿಕೆ ನೀಡಿಲ್ಲ’ ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಗುರುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವ ಇದ್ದು, ಕೋರ್ಟ್ ತೀರ್ಪುಗೆ ಎಲ್ಲರೂ ತಲೆ ಬಾಗಿದ್ದೇವೆ. ಹೈಕೋರ್ಟ್ ತೀರ್ಪು ಬಂದ ನಂತರ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬುದು ನನ್ನ ಅಭಿಪ್ರಾಯ ಆಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನಿಖೆ ನಡೆಯಲಿ, ಕಾನೂನು ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್, ಶಾಸಕರು, ಸಚಿವರು ಮುಖ್ಯಮಂತ್ರಿ ಜತೆ ಇದ್ದು ಯಾವುದೇ ಕಾರಣಕ್ಕೂ ರಾಜೀನಾಮೆ ಪ್ರೆಶ್ನೆ ಇಲ್ಲ ಎಂದು ನಿನ್ನೆ ಹೇಳಿದ್ದೆ. ಅದರ ಹೊರತು ನ್ಯಾಯಾಲಯದ ತೀರ್ಪಿನ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸಲಿಲ್ಲ ಎಂದು ವಿವರಣೆ ನೀಡಿದರು.

‘ರಾಜಕೀಯ ಪ್ರೇರಿತ ಆರೋಪ ಇದಾಗಿದೆ ಎಂಬುದೇ ನನ್ನ ವಾದ ಆಗಿತ್ತು. ನನಗೆ ಎಂದಿಗೂ ನ್ಯಾಯಾಲಯದ ಬಗ್ಗೆ ಅತ್ಯಂತ ಗೌರವ ಇದೆ ಎಂಬುದನ್ನು ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ. ಒಂದೊಮ್ಮೆ ಬಾಯಿತಪ್ಪಿ ಹೇಳಿದ್ದರೆ ಕ್ಷಮೆ ಯಾಚಿಸಲು ಸಿದ್ದ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News