ಕರಾಟೆ ಚಾಂಪಿಯನ್ ಶಿಪ್ | ಚಿನ್ನದ ಪದಕ ಗೆದ್ದ ವಿದ್ಯಾರ್ಥಿಗೆ 50 ಸಾವಿರ ರೂ.ನಗದು ಬಹುಮಾನ ನೀಡಿದ ಸಚಿವ ಝಮೀರ್ ಅಹ್ಮದ್

Update: 2023-09-29 18:15 GMT

ಬೆಂಗಳೂರು, ಸೆ.29: ಇಂಡೋನೇಷ್ಯಾದ ಜಕಾರ್ತದಲ್ಲಿ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗಳಿಸಿದ ಮುಹಮ್ಮದ್ ತಾಹೀರ್ ಎಂಬ ವಿದ್ಯಾರ್ಥಿಗೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ 50 ಸಾವಿರ ರೂ. ನಗದು ಬಹುಮಾನ ನೀಡಿ ಸನ್ಮಾನಿಸಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಂದರ್ಭದಲ್ಲಿ ತಮ್ಮ ಪೋಷಕರೊಂದಿಗೆ ಆಗಮಿಸಿದ್ದ ಮುಹಮ್ಮದ್ ತಾಹೀರ್‍ಗೆ ಅವರು ನಗದು ಬಹುಮಾನ ನೀಡಿ ಗೌರವಿಸಿದರು.

ಕಳೆದ ತಿಂಗಳು ಝಮೀರ್ ಅಹ್ಮದ್ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮ ಪೆÇೀಷಕರೊಂದಿಗೆ ಬಂದಿದ್ದ ತಾಹೀರ್, ನಾನು ಅಂತರ್‍ರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದು ಇಂಡೋನೇಷ್ಯಾಗೆ ತೆರಳಲು ಆರ್ಥಿಕ ಸಂಕಷ್ಟ ಎದುರಾಗಿದೆ. ನಮ್ಮ ತಂದೆ ಎಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದು ಅಷ್ಟು ಹಣ ಹೊಂದಿಸಲು ಆಗುತ್ತಿಲ್ಲ ಎಂದು ಹೇಳಿದ್ದ. ಆಗ ಈ ವಿದ್ಯಾರ್ಥಿಗೆ ಸಚಿವರು 65 ಸಾವಿರ ರೂ.ಗಳನ್ನು ವೆಚ್ಚ ಮಾಡಿ ವಿಮಾನಯಾನ ಟಿಕೆಟ್ ಮಾಡಿಸಿಕೊಟ್ಟಿದ್ದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಹೆಬ್ಬಾಳದ ಕ್ರೆಸೆಂಟ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಾಹೀರ್ ಚಿನ್ನದ ಪದಕ ಗೆದ್ದು ಬಂದಿದ್ದಾನೆ. ಇಂದು ಸಚಿವರ ಬಳಿ ಬಂದಿದ್ದ ತಾಹೀರ್ ಪೆÇೀಷಕರು, ನೀವು ಸಹಾಯ ಮಾಡಿದ್ದಕ್ಕೆ ನಮ್ಮ ಮಗ ಸ್ಪರ್ಧೆಯಲ್ಲಿ ಭಾಗಿಯಾಗಿ ಬಂಗಾರ ಪದಕ ಗೆಲ್ಲುವಂತಾಯಿತು ಎಂದು ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ವಿಶೇಷ ಚೇತನರ ಪರ ಕೆಲಸ ಮಾಡುವ 12:3 ಗ್ಲೋಬಲ್ ಆರ್ಗನೈಜೇಶನ್ ಸಂಸ್ಥೆಗೆ ಝಮೀರ್ ಅಹ್ಮದ್ ವೈಯಕ್ತಿಕವಾಗಿ ಎರಡು ಲಕ್ಷ ರೂ. ನೆರವು ನೀಡಿದರು. ನೂರಾರು ಮಂದಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಅಧಿಕಾರಿಗಳಿಗೆ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಆರೋಗ್ಯ ಮತ್ತು ಶಿಕ್ಷಣಕ್ಕೆ ಸಹಾಯ ಕೋರಿದವರಿಗೆ ವೈಯಕ್ತಿಕ ವಾಗಿ ಆರ್ಥಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ, ಮಾಜಿ ಮೇಯರ್ ರಾಮಚಂದ್ರಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶೇಖರ್, ಮುಖಂಡರಾದ ಜಿ.ಎ.ಬಾವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕೆಪಿಸಿಸಿ ಕಚೇರಿಯಲ್ಲಿ ನೂರಾರು ಸಾರ್ವಜನಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಸಚಿವ ಝಮೀರ್ ಅಹಮ್ಮದ್ ಖಾನ್ ಅವರು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಅಹವಾಲುಗಳನ್ನು ಸ್ವೀಕರಿಸಿ ಅರ್ಜಿಗಳನ್ನು ಅಧಿಕಾರಿಗಳಿಗೆ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಇದೇ ವೇಳೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಹಾಯ ಕೋರಿದವರಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News