ಮಣಿಪುರ ಸಂತ್ರಸ್ತರ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಸಚಿವ ಝಮೀರ್ ಅಹ್ಮದ್

Update: 2023-08-01 17:32 GMT

ಬೆಂಗಳೂರು, ಆ.1: ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗೆ ತುತ್ತಾಗಿ ಆಶ್ರಯ ಅರಸಿ ಬಂದ ವಿದ್ಯಾರ್ಥಿಗಳ ಜತೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಮಂಗಳವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.

ಚಾಮರಾಜಪೇಟೆಯ ಸೆಂಟ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಆಶ್ರಯ ಪಡೆಯುತ್ತಿರುವ ಮಣಿಪುರದ 29 ವಿದ್ಯಾರ್ಥಿನಿಯರ ಸಂಪೂರ್ಣ ಶಿಕ್ಷಣ ಹಾಗೂ ಆರೈಕೆ ವೆಚ್ಚ ಭರಿಸುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದ ಝಮೀರ್ ಅಹ್ಮದ್ ಖಾನ್, ಎರಡು ಲಕ್ಷ ರೂ. ದೇಣಿಗೆ ನೀಡಿದರು.

ಮಣಿಪುರ ವಿದ್ಯಾರ್ಥಿಗಳ ಜತೆ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಝಮೀರ್ ಅಹ್ಮದ್ ಖಾನ್, ಇಲ್ಲಿ ಸುರಕ್ಷಿತವಾಗಿರಿ ನಿಮಗೆ ಏನೇ ಬೇಕಾದರೂ ನಾನೆ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮಣಿಪುರ ವಿದ್ಯಾರ್ಥಿಗಳ ಜತೆಯೆ ಉಪಹಾರ ಸೇವಿಸಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 250 ಮಕ್ಕಳಿಗೂ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ರಾತ್ರಿ ಊಟದ ವ್ಯವಸ್ಥೆ ಮಾಡಿದರು. ಒಟ್ಟು ಮಣಿಪುರದಿಂದ 200 ವಿದ್ಯಾರ್ಥಿಗಳು ಆಶ್ರಯ ಪಡೆಯಲು ಬಂದಿದ್ದು 29 ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದು, ಉಳಿದವರಿಗೆ ಇದೇ ಸಂಸ್ಥೆಯಡಿಯಲ್ಲಿರುವ ಬೇರೆ ಕಡೆ ಆಶ್ರಯ ನೀಡಲಾಗಿದೆ. ಈ ವಿದ್ಯಾರ್ಥಿಗಳು ಏಳು ವರ್ಷ ಇಲ್ಲೇ ವಿದ್ಯಾಭ್ಯಾಸ ಪಡೆಯಲಿದ್ದಾರೆ.

ಮಣಿಪುರ ವಿದ್ಯಾರ್ಥಿಗಳನ್ನು ದತ್ತು ಪಡೆದ ಸಚಿವರು

ಸೆಂಟ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಉಳಿದುಕೊಂಡಿರುವ 29 ವಿದ್ಯಾರ್ಥಿಗಳನ್ನು ದತ್ತು ಪಡೆಯುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದ ಸಚಿವ ಝಮೀರ್ ಅಹ್ಮದ್ ಖಾನ್, ಈ ವಿದ್ಯಾರ್ಥಿಗಳು ಎಲ್ಲಿಯವರೆಗೆ ಈ ಸಂಸ್ಥೆಯಲ್ಲಿ ಇರುತ್ತಾರೊ ಅಲ್ಲಿಯವರೆಗೆ ಅವರ ಶಿಕ್ಷಣ ಹಾಗೂ ಊಟ, ತಿಂಡಿ, ಆರೈಕೆಯ ವ್ಯವಸ್ಥೆಯನ್ನು ವೈಯಕ್ತಿಕವಾಗಿ ನೋಡಿಕೊಳ್ಳುವುದಾಗಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News