ಶಾಸಕ ಜಿ.ಟಿ.ದೇವೇಗೌಡ ಸತ್ಯ ಹೇಳಿದ್ದಾರೆ: ಸಿಎಂ‌ ಸಿದ್ದರಾಮಯ್ಯ

Update: 2024-10-03 12:28 GMT

ಮೈಸೂರು: ಜನರ ಆಶೀರ್ವಾದದಿಂದ ನಾವು ಆಡಳಿತಕ್ಕೆ ಬಂದಿದ್ದೇವೆ. 5 ವರ್ಷಗಳ ಕಾಲ ರಾಜ್ಯದ ಜನತೆ ನಮಗೆ ಅವಕಾಶ ಕೊಟ್ಟಿದ್ದಾರೆ. ಈಗಲೂ ಎಷ್ಟೇ ತೊಡಕುಗಳು ಎದುರಾದರೂ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಐದು ವರ್ಷಗಳ ಕಾಲ ನಾವು ಆಡಳಿತ ಮಾಡಿಯೇ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‌ಸತ್ಯಕ್ಕೆ ಯಾವತ್ತೂ ಜಯ ದೊರೆಯುತ್ತದೆ. ನಿಮ್ಮೆಲ್ಲರ ಆಶೀರ್ವಾದ, ಈ ರಾಜ್ಯದ ಜನರ ಆಶೀರ್ವಾದ ಈ ಸರ್ಕಾರದ ಮೇಲೆ ಇರುವ ತನಕ ಯಾರು ಏನೂ ಮಾಡಲು ಸಾಧ್ಯವಿಲ್ಲ. ನಾನು ಈ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದೇನೆ. ಮೂರು ಬಾರಿ ಸೋತಿದ್ದೇನೆ. ಚಾಮುಂಡೇಶ್ವರಿ ತಾಯಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಇಲ್ಲಿಯವರೆಗೆ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ಇಷ್ಟು ದೀರ್ಘಕಾಲ ರಾಜಕಾರಣದಲ್ಲಿ ಇರಲು ಸಾಧ್ಯವಿರಲಿಲ್ಲ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್ ಪಕ್ಷದವರು, ಅವರು ಮುಡಾ ಸದಸ್ಯರಾಗಿದ್ದವರು. ಅವರಿಗೆ ಸತ್ಯ ಏನು ಎಂಬುದು ಗೊತ್ತಿದೆ. ಹಾಗಾಗಿ ಆವರು ಸತ್ಯವನ್ನು ಹೇಳಿದ್ದಾರೆ. ಸತ್ಯ ಯಾವತ್ತಿದ್ದರು ಗೆಲ್ಲುತ್ತದೆ. ಸತ್ಯಮೇವ ಜಯತೆ ಎಂದು ಹೇಳಿದರು.

ನನಗೆ ನ್ಯಾಯಾಲಯಗಳಲ್ಲಿ ನಂಬಿಕೆಯಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ಗಾಂಧೀಜಿ ಅವರು ಹೇಳಿದಂತೆ ಆತ್ಮಸಾಕ್ಷಿ ನ್ಯಾಯಾಲಯ ಎಲ್ಲಾ ನ್ಯಾಯಾಲಯಗಳಿಗಿಂತ ಮಿಗಿಲಾದುದು. ಆತ್ಮಸಾಕ್ಷಿಗೆ ತಕ್ಕಂತೆ ನಡೆದಿದ್ದೇನೆ ಎಂಬ ದೃಢ ನಂಬಿಕೆ ಇದೆ ಎಂದು ಹೇಳಿದರು.

ಪರಸ್ಪರರನ್ನು ಪ್ರೀತಿಸಬೇಕೆ ಹೊರತು ಯಾರನ್ನೂ ದ್ವೇಷಿಸಬಾರದು. ಎಲ್ಲಾ ಧರ್ಮಗಳು ಪರಸ್ಪರ ಪ್ರೀತಿಸಿ ಮಾನವರಾಗಿ ಬಾಳುವ ಸಂದೇಶವನ್ನು ನೀಡಿವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News