ಐಟಿ ದಾಳಿಯಲ್ಲಿ ಸಿಕ್ಕಿರುವ ಹಣ ಬಿಜೆಪಿಗೆ ಸೇರಿದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

Update: 2023-10-17 08:03 GMT

ಬೆಂಗಳೂರು: “ಕಳೆದ ಮೂರು ದಿನಗಳಿಂದ ನಡೆದ ಐಟಿ ದಾಳಿಯಲ್ಲಿ ಕೆಲವು ಡೈರಿ, ಪುಸ್ತಕಗಳು ಪತ್ತೆಯಾಗಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಈ ದಾಖಲೆಗಳು ಬಹಿರಂಗಗೊಂಡರೆ, ದಾಳಿಯಲ್ಲಿ ಸಿಕ್ಕಿರುವ ಹಣ ಯಾರಿಗೆ ಸಂಬಂಧಿಸಿದ್ದು ಎಂಬ ಸತ್ಯಾಂಶ ಹೊರಬರುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ವಿರೋಧ ಪಕ್ಷಗಳ ನಾಯಕ ಟೀಕೆ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ರಾಜ್ಯದಲ್ಲಿ ಆಗಿರುವ ಭ್ರಷ್ಟಾಚಾರಗಳನ್ನು ಮಾಡಿರುವುದು ಬಿಜೆಪಿ ಪಕ್ಷ. ಇಡೀ ಭ್ರಷ್ಟಾಚಾರಕ್ಕೆ ಬಿಜೆಪಿಯೇ ಅಡಿಪಾಯ. ಅದು ಭ್ರಷ್ಟಾಚಾರದ ಹಿಮಾಲಯ ಇದ್ದಂತೆ. ಹೀಗಾಗಿ ಕರ್ನಾಟಕದ ಜನತೆ ಅವರನ್ನು ಅಧಿಕಾರದಿಂದ ಕಿತ್ತೆಸೆದಿದ್ದಾರೆʼʼ ಎಂದು ಟೀಕಿಸಿದರು. 

ʼʼಈಗ ನಡೆದಿರುವ ಐಟಿ ದಾಳಿಯಲ್ಲಿ ಸಿಕ್ಕಿರುವ ಹಣ ಬಿಜೆಪಿಗೆ ಸೇರಿದ್ದು, ಈ ಹಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಿರುವುದು ಬಿಜೆಪಿ ಸರ್ಕಾರ. ಇದು ಬಿಜೆಪಿಯ ಪಾಪದ ಕೂಸು” ಎಂದು ತಿಳಿಸಿದರು.

ಕಾಂಗ್ರೆಸ್ ಹೈಕಮಾಂಡ್ ನಡುಗುತ್ತಿದೆ ಎಂಬ ಆರ್. ಅಶೋಕ್ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, “ನಡುಗುತ್ತಿರುವುದು ಕಾಂಗ್ರೆಸ್ ಹೈಕಮಾಂಡ್ ಅಲ್ಲ, ಬಿಜೆಪಿ ಹೈಕಮಾಂಡ್. ಈ ಭ್ರಷ್ಟಾಚಾರಕ್ಕೆಲ್ಲ ಅಡಿಪಾಯವೇ ಆರ್.ಅಶೋಕ್, ನಕಲಿ ಸ್ವಾಮಿ, ಲೂಟಿ ರವಿ, ನವರಂಗಿ ನಾರಾಯಣ, ಬ್ಲಾಕ್ ಮೇಲರ್ ಗಳು. ಈ ಅಕ್ರಮಗಳ ಹಿಂದೆ ಇವರ ಹೆಸರಿದೆ. ಅವರು ಯಾರಿಂದ ತನಿಖೆ ಮಾಡಿಸುತ್ತಾರೋ ಮಾಡಿಸಲಿ. ಈ ವಿಚಾರವಾಗಿ ತನಿಖೆ ಆಗಲಿ. ಅದನ್ನೇ ನಾವು, ನಮ್ಮ ನಾಯಕರು ಹೇಳುತ್ತಿದ್ದೇವೆ. ಅವರ ಕಾಲದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರವೇ ಇದಕ್ಕೆ ಅಡಿಪಾಯ. ಆದಾಯ ತೆರಿಗೆ ಅಧಿಕಾರಿಗಳು ತಮ್ಮ ದಾಳಿ ಮುಗಿಸಿ ಅಧಿಕೃತ ಹೇಳಿಕೆ ಪ್ರಕಟಿಸಲಿ ಎಂದು ನಾವು ಇಷ್ಟು ದಿನ ಮಾತನಾಡಿರಲಿಲ್ಲ. ನಿನ್ನೆ ಐಟಿ ಅಧಿಕಾರಿಗಳು ಹೇಳಿಕೆ ಪ್ರಕಟಿಸಿದ್ದಾರೆ. ಐಟಿ, ಇಡಿ ಎಲ್ಲಾ ತನಿಖಾ ಸಂಸ್ಥೆಗಳು ಅವರ ಕೈಯಲ್ಲೇ ಇವೆ. ಈಗ ಎಲ್ಲಾ ದಾಖಲೆಗಳು ಅವರ ಬಳಿಯೇ ಇವೆ. ಅವುಗಳನ್ನು ಬಿಚ್ಚಿಡಲಿ” ಎಂದು ಸವಾಲೆಸೆದರು.

ಬಿಜೆಪಿಯು ಕಲೆಕ್ಷನ್ ಮಾಸ್ಟರ್ ಎಂಬ ಪೋಸ್ಟರ್ ಬಿಡುಗಡೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಬಿಜೆಪಿಯ ಭ್ರಷ್ಟಾಚಾರ ಹಿಮಾಲಯ ಪರ್ವತದಷ್ಟಿದೆ. ಸಿಎಂ ಹುದ್ದೆಗೆ 2500 ಕೋಟಿ ಕಲೆಕ್ಷನ್ ಮಾಡಲಾಗಿತ್ತು. ಮುಖ್ಯಮಂತ್ರಿ ಕಚೇರಿಯಲ್ಲೇ ಎಷ್ಟು ಭ್ರಷ್ಟಾಚಾರ ನಡೆದಿತ್ತು ಎಂದು ಬಿಜೆಪಿಯ ಶಾಸಕರು, ಮಾಜಿ ಮಂತ್ರಿಗಳೇ ಹೇಳಿದ್ದಾರೆ. ಈಗ ಮಾತಾಡುತ್ತಿರುವವರು ಅದನ್ನು ಒಮ್ಮೆ ನೋಡಲಿ ” ಎಂದು ಕುಟುಕಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News