ನಾಳೆಯಿಂದ (ಜು.1) ಅನ್ನಭಾಗ್ಯ ಫಲಾನುಭವಿಗಳ ಖಾತೆಗೆ ಹಣ ಜಮೆ: ಸಚಿವ ಕೆ.ಎಚ್.ಮುನಿಯಪ್ಪ
ಬೆಂಗಳೂರು, ಜೂ.30 :ಕೇಂದ್ರ ಸರಕಾರ ಅಕ್ಕಿ ನೀಡದ ಹಿನ್ನೆಲೆ ಅನ್ನಭಾಗ್ಯ ಯೋಜನೆಯಡಿ ನಾಳೆಯಿಂದ (ಜು.1) ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ಸಿಗುವವರೆಗೆ ಒಬ್ಬರಿಗೆ 170 ರೂಪಾಯಿ ಕೊಡುತ್ತೇವೆ. ಅಕ್ಕಿ ಸಿಕ್ಕರೆ ಆನಂತರ ಅಕ್ಕಿ ಕೊಡುತ್ತೇವೆ.ಇನ್ನೂ ದಕ್ಷಿಣ ಭಾಗದಲ್ಲಿರುವವರಿಗೆ ರಾಗಿ, ಉತ್ತರದಲ್ಲಿ ಜೋಳ ಕೊಡುತ್ತೇವೆ. ರಾಗಿ ದಾಸ್ತಾನು ಇದೆ, ಜೋಳ ದಾಸ್ತಾನು ಇಲ್ಲ. ದಾಸ್ತಾನು ಆದ ಬಳಿಕ ಧಾನ್ಯಗಳ ಹಂಚಿಕೆ ಮಾಡುತ್ತೇವೆ ಎಂದು ಅವರು ನುಡಿದರು.
ಅನ್ನಭಾಗ್ಯ ಯೋಜನೆಗೆ ಸಮಾವೇಶ ಅವಶ್ಯಕತೆ ಇಲ್ಲ. ನಾಳೆಯಿಂದ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಎಂಎಸ್‍ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ. ಮಾತು ಕೊಟ್ಟಂತೆ ಜುಲೈ 1 ರಿಂದ ಯೋಜನೆ ಜಾರಿ ಆಗಲಿದೆ. ಈಗ ಅಕ್ಕಿ ಬದಲು ಹಣ ವರ್ಗಾವಣೆ ಮಾಡುತ್ತೇವೆ ಎಂದರು.
ಕೇಂದ್ರ ಸರಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ಟರೆ, ನಾವು ಅಕ್ಕಿ ಹಂಚಿಕೆ ಮಾಡಲು ಸಿದ್ಧರಾಗಿದ್ದೇವೆ. ಅದು ಅಲ್ಲದೆ, ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇರುವುದು ಗೊತ್ತಿದೆ. ಆದರೂ, ಬಡವರ ಅನುಕೂಲಕ್ಕೆ ಮುಂದಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.