ಮುಂಗಾರು ಅಧಿವೇಶನ | ಕೋಲಾಹಲದಲ್ಲಿಯೇ ಮುಗಿದ ‘ಶುಕ್ರವಾರದ ಕಲಾಪʼ

Update: 2024-07-19 14:19 GMT

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿ ಅಕ್ರಮ ಆರೋಪ ಪ್ರಕರಣ ಸಂಬಂಧದ ವಿಚಾರಕ್ಕೆ ಸರಕಾರ ಸೂಕ್ತ ಉತ್ತರ ನೀಡಿಲ್ಲವೆಂದು ಪ್ರತಿಪಕ್ಷಗಳು ನಿನ್ನೆ ಆರಂಭಿಸಿದ ಧರಣಿಯನ್ನು ಶುಕ್ರವಾರವೂ ಮುಂದುವರೆಸಿದರು. ಈ ವೇಳೆ ವಾಗ್ದಾಳಿ, ಆರೋಪ-ಪ್ರತ್ಯಾರೋಪ ನಡೆದು ಕೋಲಾಹಲ ಉಂಟಾಯಿತು.

ಶುಕ್ರವಾರ ಬೆಳಗ್ಗೆ ವಿಧಾನಸಭೆಯ ಸದನ ಸಮಾವೇಶಗೊಳ್ಳುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸ್ಪೀಕರ್ ಪೀಠದ ಮುಂದಿನ ಬಾವಿಗೆ ಇಳಿದು ಧರಣಿ ನಡೆಸಿ, ಘೋಷಣೆ ಕೂಗಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರ ವಿರುದ್ಧ ಪ್ರತಿಪಕ್ಷ ಸದಸ್ಯರು ವಾಗ್ದಾಳಿ ನಡೆಸಿದರು. ಇದರಿಂದ ಕಲಾಪದಲ್ಲಿ ಗದ್ದಲದಿಂದ ಕಾವೇರಿದ ವಾತವಾರಣ ನಿರ್ಮಾಣಗೊಂಡ ಹಿನ್ನೆಲೆ ಸ್ಪೀಕರ್ ಯು.ಟಿ.ಖಾದರ್, ಹತ್ತು ನಿಮಿಷಗಳ ಕಾಲ ಮುಂದೂಡಿದರು.

ಕೆಲ ಹೊತ್ತಿನ ಬಳಿಕ ಸದನ ಮತ್ತೆ ಸಮಾವೇಶಗೊಂಡಾಗಲೂ ವಿಪಕ್ಷಗಳ ಸದಸ್ಯರು ಧರಣಿ ನಡೆಸಿದರೆ, ಆಡಳಿತ ಪಕ್ಷದ ಸದಸ್ಯರು ಕಲಾಪದಲ್ಲಿ ಪಾಲ್ಗೊಂಡು, ಮಳೆ ಅನಾಹುತ, ಇತರೆ ನಿಗಮಗಳ ಹಗರಣಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಕಲಾಪ ಸುಗಮವಾಗಿ ನಡೆಯಲು ಸಹಕರಿಸಿ, ಧರಣಿ ಕೈಬಿಟ್ಟು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿ. ಅಧಿವೇಶನ ನಡೆಸಲು ನಿಯಮ ಮತ್ತು ಸಂಪ್ರದಾಯವಿದೆ. ಹಿಂದೆ ಆಗಿರುವುದನ್ನೆಲ್ಲಾ ಮರೆತು ಕಲಾಪದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.

ಆರ್.ಅಶೋಕ್ ಮಾತನಾಡಿ, ‘ಮುಖ್ಯಮಂತ್ರಿ ಆಡಳಿತ ಪಕ್ಷದ ಶಾಸಕರಿಗೆ ತಮನ್ನು ಸಮರ್ಥಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಅದಕ್ಕಾಗಿ ಇಂದು ಕಲಾಪದಲ್ಲಿ ಕಾಂಗ್ರೆಸ್ ಶಾಸಕರು ಗಲಾಟೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದಕ್ಕೂ ಮೊದಲು ಆರ್.ಅಶೋಕ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಎದ್ದು ನಿಂತು ಮಾತನಾಡಲು ಮುಂದಾದರು. ಅಷ್ಟರಲ್ಲಿ ಕಾಂಗ್ರೆಸ್‍ನ ಹಲವು ಶಾಸಕರು ಎದ್ದು ನಿಂತು ಪ್ರತಿಯಾಗಿ ಉತ್ತರಿಸಲು ಮುಂದಾದರು. ಆಗ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಈ ವೇಳೆ ಮಧ್ಯ ಪ್ರವೇಶಿಸಿದ ಖಾದರ್, ಪ್ರತಿಪಕ್ಷದವರು ಧರಣಿ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರು ಏಕೆ ಎದ್ದು ನಿಲ್ಲುತ್ತಿದ್ದೀರಿ. ನಿಮ್ಮ ಸ್ಥಾನದಲ್ಲೇ ಕುಳಿತುಕೊಳ್ಳಿ. ಪ್ರತಿಪಕ್ಷದವರ ಕೆಲಸವನ್ನು ಆಡಳಿತ ಪಕ್ಷದವರು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಾದ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಮೂರು ವಿಧೇಯಕಗಳನ್ನು ಮಂಡಿಸಿದರು. ಬಳಿಕ ಸಭಾಧ್ಯಕ್ಷರು ಕಾಂಗ್ರೆಸ್ ಶಾಸಕ ಪೊನ್ನಣ್ಣ ಅವರಿಗೆ ಮಳೆ ಹಾನಿ ಕುರಿತು ಚರ್ಚೆ ಮಾಡಲು ಅವಕಾಶ ನೀಡಿದರು.

ಎಚ್.ಕೆ.ಪಾಟೀಲ್ ಮಾತನಾಡಿ ಸದನದ ಘನತೆ ಕಾಪಾಡಿ, ಮುಖ್ಯಮಂತ್ರಿ ಉತ್ತರವನ್ನು ಆಲಿಸಿ. ಈ ರೀತಿ ಕಲಾಪಕ್ಕೆ ಅಡ್ಡಿ ಪಡಿಸಿದರೆ ಅಧಿವೇಶನದ ಸಮಯ ಹಾಳಾಗಲಿದೆ. ಸದನದ ಘನತೆ, ಗೌರವವನ್ನು ಗಾಳಿಗೆ ತೂರಿದ್ದಾರೆ ಎಂದು ಟೀಕಿಸಿದರು.

ಮತ್ತೆ ಅಶೋಕ್ ಮಾತನಾಡಿ, ವಾಲ್ಮೀಕಿ ನಿಗಮದ ಹಗರಣ ಮುಚ್ಚಿ ಹಾಕಲು ಈರೀತಿ ಮಾಡುತ್ತಿದ್ದಾರೆ. ಚಂದ್ರಶೇಖರನ್ ಸಾವಿಗೆ ನ್ಯಾಯ ಕೊಡಿ ಎಂದು ಪಟ್ಟುಹಿಡಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್ಸಿನ ತಮಯ್ಯ ಸೇರಿದಂತೆ ಹಲವು ಸದಸ್ಯರು ಸದನ ನಡೆಸಲು ಅಡ್ಡಿ ಮಾಡುತ್ತಿರುವ ಶಾಸಕರನ್ನು ಹೊರಹಾಕಿ ಎಂದು ಮನವಿ ಮಾಡಿದರು. ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಬಿಜೆಪಿ ಆಡಳಿತಾವಧಿಯಲ್ಲಿ ಬೋವಿ ನಿಗಮ, ದೇವರಾಜ ಅರಸು ಟ್ರಕ್ ಟರ್ಮಿನಲ್ ಸೇರಿದಂತೆ ಹಲವು ನಿಗಮಗಳಲ್ಲಿ 220 ಕೋಟಿ ರೂ. ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದರು.

ಇದೇ ರೀತಿ ಸದನದಲ್ಲಿ ಆಡಳಿತ ಮತ್ತು ಪತ್ರಿ ಪಕ್ಷಗಳ ಶಾಸಕರ ನಡುವೆ ಕೋಲಾಹಲದ ವಾತಾವರಣ ಸಷ್ಟಿಯಾಯಿತು.

ತಾಕತ್ತಿದ್ದರೆ ಚರ್ಚೆಗೆ ಬನ್ನಿ : ‘ಬಿಜೆಪಿ ಅವಧಿಯಲ್ಲಿ ಆದ ಹಗರಣಗಳ ಬಗ್ಗೆ ಉಲ್ಲೇಖ ಮಾಡಿದ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ, ತಾಕತ್ತಿದ್ದರೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಬೋವಿ ನಿಗಮ ಸೇರಿದಂತೆ ಇತರ ಹಗರಣಗಳ ಬಗ್ಗೆ ಶಿವಲಿಂಗೇಗೌಡ ಸದನದಲ್ಲಿ ಪ್ರಸ್ತಾಪಿಸಿ, ನಾವು ನಿಗಮದ ಅನ್ಯಾಯ ಸಮರ್ಥನೆ ಮಾಡುತ್ತಿಲ್ಲ. ಯಾರು ತಪ್ಪು ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ. ಸಿಎಂ ಎಲ್ಲ ನಿಗಮದ ಅಕೌಂಟ್ ನೋಡಲು ಆಗುತ್ತಾ? ತಪ್ಪು ಮಾಡಿದವರು ಅನುಭವಿಸುತ್ತಾರೆ. ಆತ್ಮಸಾಕ್ಷಿ ಇದ್ದರೆ ಚರ್ಚೆಗೆ ಬನ್ನಿ ಎಂದು ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News