ಮುಂಗಾರು ಅಧಿವೇಶನ | ಬೆಂಗಳೂರು ಈಗ ಡೆಂಗ್ಯೂ’ಳೂರು ಆಗಿದೆ : ಆರ್.ಅಶೋಕ್

Update: 2024-07-22 12:16 GMT

ಬೆಂಗಳೂರು: ಡೆಂಗಿ ಜ್ವರ ಪ್ರಕರಣಗಳು ರಾಜ್ಯದೆಲ್ಲೆಡೆ ಹೆಚ್ಚಾಗುತ್ತಿದ್ದು, ಅದರಲ್ಲೂ ‘ಬೆಂಗಳೂರು ಈಗ ಡೆಂಗ್ಯೂ’ಳೂರು’ ಎನ್ನುವಂತೆ ಆಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.

ಸೋಮವಾರ ವಿಧಾನಸಭೆಯ ಕಲಾಪದಲ್ಲಿ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡಿದ ಅವರು, ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಡೆಂಗಿ ಜ್ವರ ಪ್ರಕರಣಗಳು ಹೆಚ್ಚಾಗಿದ್ದು, ಡೆಂಗಿ ಪರೀಕ್ಷೆಗೆ ಸರಕಾರ ದರ ನಿಗದಿಪಡಿಸಿದ್ದರೂ, ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟು ಹಣ ವಸೂಲಿ ಮಾಡುತ್ತಿವೆ. ಹೀಗಾಗಿ ಸರಕಾರದಿಂದಲೇ ಡೆಂಗಿ ಜ್ವರಕ್ಕೆ ಉಚಿತವಾಗಿ ಪರೀಕ್ಷೆ ಮಾಡಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಈ ವರ್ಷದ ಜನವರಿ 1ರಿಂದ ಜುಲೈ 19ರ ಅವಧಿಯಲ್ಲಿ ಒಟ್ಟು 10 ಮಂದಿ ಡೆಂಗಿ ಜ್ವರದಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಮಕ್ಕಳೂ ಸೇರಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಜತೆಗೆ, ಡೆಂಗಿಯಿಂದ ಬಾಧಿತರಾಗುತ್ತಿರುವ ಒಂದು ವರ್ಷದೊಳಗಿನ ಮಕ್ಕಳ ಸಂಖ್ಯೆ ಏರುಗತಿ ಪಡೆದಿದ್ದು, ಒಟ್ಟು 217 ಮಕ್ಕಳು ಡೆಂಗಿ ಪೀಡಿತರಾಗಿದ್ದಾರೆ. 1 ರಿಂದ 18 ವರ್ಷದೊಳಗಿನವರ ಸಂಖ್ಯೆಯೂ 4,592ಕ್ಕೆ ಹೆಚ್ಚಿದೆ ಎಂದು ಅವರು ವಿವರಿಸಿದರು.

ಕೆಲ ಮಕ್ಕಳಲ್ಲಿ ರೋಗಗಳು ಸುಪ್ತವಾಗಿರುತ್ತವೆ. ಎಷ್ಟೇ ಪರೀಕ್ಷೆ ನಡೆಸಿದರೂ ಅವುಗಳು ಪತ್ತೆಯಾಗುವುದೇ ಇಲ್ಲ. ಅಂತಹವರಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆ ಇರುತ್ತದೆ. ಡೆಂಗಿ ವೈರಾಣು ಅವರ ದೇಹದ ಒಳ ಹೊಕ್ಕು ಅಂಗಾಂಗಗಳಿಗೆ ಹಾನಿ ಉಂಟು ಮಾಡುತ್ತದೆ. ಹೀಗಾಗಿ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಇನ್ನೂ, ಡೆಂಗಿ ನಿಯಂತ್ರಣಕ್ಕೆ ರಾಜ್ಯ ಸರಕಾರ ಸೊಳ್ಳೆ ಪರದೆಗಳ ಮೊರೆ ಹೋಗಿರುವ ಸುದ್ದಿ ನೋಡಿದ್ದು, ಇದು ಹಾಸ್ಯಾಸ್ಪದ ಎಂದು ಅಶೋಕ್ ಉಲ್ಲೇಖಿಸಿದರು.

ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಳೆಗೇರಿಗಳಿಗೆ ಸೊಳ್ಳೆ ಪರದೆ ವಿತರಿಸುತ್ತಿಲ್ಲ. ಈಡಿಸ್ ಸೊಳ್ಳೆ ಬೆಳಗ್ಗೆ ಕಚ್ಚುತ್ತದೆ, ರಾತ್ರಿ ಕಚ್ಚುವುದಿಲ್ಲ. ಹೀಗಾಗಿ ಸೊಳ್ಳೆ ಪರದೆಯ ಅಗತ್ಯವಿಲ್ಲ ಎಂದರು. ನಂತರ, ನಿಲುವಳಿ ಸೂಚನೆ ಬದಲಾಗಿ ನಿಯಮ 69ರಡಿ ಚರ್ಚೆಗೆ ಕೊಡುವುದಾಗಿ ಸ್ಪೀಕರ್ ಯು.ಟಿ.ಖಾದರ್ ಪ್ರಕಟಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News