ಮುಡಾ ಪ್ರಕರಣ | ಬೆಂಗಳೂರು, ಮೈಸೂರು ಸೇರಿ 9 ಕಡೆ ಈಡಿ ದಾಳಿ
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯದ (ಈಡಿ) ಅಧಿಕಾರಿಗಳು ಬೆಂಗಳೂರು, ಮೈಸೂರು ಸೇರಿ 9ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡರು.
ಸೋಮವಾರ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್ ಎಂಬುವರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿತು.
ಮಂಜುನಾಥ್, ಮೈಸೂರಿನಲ್ಲಿ ಕಾರ್ತಿಕ್ ಬಡಾವಣೆ ಹೆಸರಲ್ಲಿ ಲೇಔಟ್ ನಿರ್ಮಾಣ ಮಾಡಿದ್ದು, 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆ ವೇಳೆ ಅಧಿಕಾರಿಗಳಿಗೆ ಲಂಚ ನೀಡಿದ್ದ ಆರೋಪವಿತ್ತು. ಅದೇ ರೀತಿ, ಬಾಣಸವಾಡಿಯ ದೀಪಿಕಾ ರಾಯಲ್ ಅಪಾರ್ಟ್‍ಮೆಂಟ್‍ನಲ್ಲಿರುವ ದಿನೇಶ್ ಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿದರು. ಆದರೆ, ಈ ವೇಳೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಮುಡಾದ ನಿರ್ಗಮಿತ ಆಯುಕ್ತ ನಟೇಶ್ ಅವರ ಮಲ್ಲೇಶ್ವರಂ 10ನೇ ಕ್ರಾಸ್‍ನಲ್ಲಿರುವ ನಿವಾಸದ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು, ಶೋಧ ಕೈಗೊಂಡರು.
ಮೈಸೂರಿನಲ್ಲಿ ಕೆಲ ಬಿಲ್ಡರ್ಸ್ ಹಾಗೂ ಮಾಜಿ ಮುಡಾ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿರುವುದಾಗಿ ಮೂಲಗಳು ತಿಳಿಸಿವೆ. ಇನ್ನೂ, ಪ್ರಕರಣಕ್ಕೆ ಸಂಬಂಧಿಸಿದಂತೆ ಅ.18ರಂದು ಮೈಸೂರಿನ ಮುಡಾ ಕಚೇರಿ ಸೇರಿದಂತೆ ವಿವಿಧೆಡೆ ಶೋಧ ನಡೆಸಿದ್ದ ಈಡಿ ಅಧಿಕಾರಿಗಳು ಕೆಲ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದ್ದರು.
ಅಲ್ಲದೆ ಮುಡಾದ ಆರು ಜನ ಅಧಿಕಾರಿಗಳನ್ನು ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಈಡಿ ಕಚೇರಿಯಲ್ಲಿ ವಿಚಾರಣೆಗೊಳಪಡಿಸಿದ್ದರು. ಮುಂದುವರೆದ ಭಾಗವಾಗಿ ಇಂದು ಎರಡನೇ ಹಂತದ ದಾಳಿ ನಡೆದಿದೆ.
ವಿಚಾರಣೆಗೆ ಹಾಜರಾದ ಆರ್‌ಟಿಐ ಕಾರ್ಯಕರ್ತ: ಮುಡಾ ನಿವೇಶನ ಪ್ರಕರಣದ ಕುರಿತು ದೂರುದಾರ ಆರ್ ಟಿಐ ಕಾರ್ಯಕರ್ತ ಗಂಗರಾಜು, ಇಲ್ಲಿನ ಶಾಂತಿನಗರದ ಈಡಿ ಕಚೇರಿಗೆ ಹಾಜರಾಗಿ ಮಾಹಿತಿ ಒದಗಿಸಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಅ.22ರಂದು ನನಗೆ ನೋಟಿಸ್ ನೀಡಲಾಗಿತ್ತು. ಆದರೆ, ನನಗೆ ನೋಟಿಸ್ ತಡವಾಗಿ ತಲುಪಿದ ಕಾರಣ ಕಾಲಾವಕಾಶ ಕೇಳಿದ್ದೆ. ಅದರಂತೆ ಇಂದು ವಿಚಾರಣೆಗೆ ನಾನು ಹಾಜರಾಗಿದ್ದೇನೆ ಎಂದು ಗಂಗರಾಜು ಹೇಳಿದ್ದಾರೆ.