ಮುಡಾ ಪ್ರಕರಣ | ಲೋಕಾಯುಕ್ತಕ್ಕೆ ಈ.ಡಿ ಪತ್ರ ಬರೆದಿರುವುದು ಕಾನೂನು ಬಾಹಿರ : ಜಿ.ಪರಮೇಶ್ವರ್

Update: 2024-12-04 14:10 GMT

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿನ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಲೋಕಾಯುಕ್ತಕ್ಕೆ ಕೇಂದ್ರ ಸರಕಾರದ ಜಾರಿ ನಿರ್ದೇಶನಾಲಯ (ಈ.ಡಿ) ಪತ್ರ ಬರೆದಿರುವುದು ಕಾನೂನು ಬಾಹಿರ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಆಕ್ಷೇಪಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಡಾ ಪ್ರಕರಣದ ಕುರಿತು ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಈವರೆಗೆ ಅವರು ನ್ಯಾಯಾಲಯಕ್ಕೆ ಯಾವುದೇ ವರದಿಯನ್ನೂ ಸಲ್ಲಿಸಿಲ್ಲ. ಈ ಸಂದರ್ಭದಲ್ಲಿ ಈ.ಡಿಯವರು ಲೋಕಾಯುಕ್ತಕ್ಕೆ ಪತ್ರದ ಮೂಲಕ ಅನೇಕ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದರು.

ಕಾನೂನಾತ್ಮಕವಾಗಿ ಒಂದೇ ಪ್ರಕರಣಕ್ಕೆ ಎರಡು ಸಂಸ್ಥೆಗಳು ತನಿಖೆ ನಡೆಸಲು ಅವಕಾಶ ಇಲ್ಲ. ಮಾಧ್ಯಮಗಳಿಗೆ ಸೋರಿಕೆಯಾಗಿರುವ ಈ.ಡಿ ಬರೆದಿರುವ ಪತ್ರದಲ್ಲಿ ಅವರು ಕೆಲವು ವಿಚಾರಗಳಲ್ಲಿ ತೀರ್ಮಾನಕ್ಕೂ ಬಂದಿದ್ದಾರೆ. ಎಲ್ಲೋ ಒಂದು ಕಡೆ ಈ.ಡಿಯವರು ಲೋಕಾಯುಕ್ತ ತನಿಖೆಯ ಮೇಲೆ ಪ್ರಭಾವ ಬೀರುತ್ತಿದೆ ಅಥವಾ ಹೀಗೇ ತನಿಖೆ ಮಾಡಿ ಎಂದು ಪರೋಕ್ಷ ಸೂಚನೆ ಕೊಡುವಂತಿದೆ ಎಂದು ಪರಮೇಶ್ವರ್ ದೂರಿದರು.

ಈ.ಡಿ ಬರೆದಿರುವ ಪತ್ರ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದರ ಹಿಂದೆ ರಾಜಕೀಯ ಕಾರಣಗಳಿರಬಹುದು. ಇತ್ತೀಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಸರಕಾರದ ಮೇಲೆ ಆರೋಪಗಳನ್ನು ಮಾಡಲು ಬಿಜೆಪಿಗೆ ಯಾವುದೇ ವಿಚಾರಗಳು ಸಿಗುತ್ತಿಲ್ಲ. ಆದುದರಿಂದ, ಈ.ಡಿ. ಮೂಲಕ ಈ ರೀತಿಯ ಪ್ರಯತ್ನ ನಡೆಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಿಬಿಐ, ಈ.ಡಿ ಹಾಗೂ ಆದಾಯ ತೆರಿಗೆ ಇಲಾಖೆಗಳು ಕೇಂದ್ರ ಸರಕಾರದ ಕೈಗೊಂಬೆಗಳಾಗಿವೆ. ಎಲ್ಲೆಲ್ಲಿ ಬಿಜೆಪಿಯ ರಾಜ್ಯ ಘಟಕಗಳು ದುರ್ಬಲವಾಗಿವೆಯೋ, ಅಂತಹ ಕಡೆ ಸಿಬಿಐ, ಈ.ಡಿ, ಐಟಿಗಳನ್ನು ವಿಪಕ್ಷಗಳ ವಿರುದ್ಧ ಬಳಕೆ ಮಾಡುತ್ತಿದ್ದಾರೆ ಎಂದು ದೂರಿದರು.

ಕರ್ನಾಟಕ, ತಮಿಳುನಾಡು, ಜಾರ್ಖಂಡ್ ಗಳಲ್ಲಿ ಇದಾಗಿದೆ. ಈ.ಡಿಯನ್ನು ರಾಜಕೀಯ ಅಸ್ತ್ರವಾಗಿ ಕೇಂದ್ರ ಸರಕಾರ ಬಳಕೆ ಮಾಡುತ್ತಿದೆ. ಮುಡಾ ಪ್ರಕರಣದಲ್ಲಿ ಈ.ಡಿ ಹೇಗೆ ಪ್ರವೇಶ ಮಾಡಿತು ಎಂಬುದೇ ಗೊತ್ತಾಗುತ್ತಿಲ್ಲ. ಮನಿ ಲಾಂಡರಿಂಗ್(ಅಕ್ರಮ ಹಣ ವರ್ಗಾವಣೆ) ಇದ್ದರೆ ಈ.ಡಿ ಬರಬಹುದು. ಆದರೆ, ಈ.ಡಿ ತನಿಖೆಯನ್ನು ಯಾರೂ ಕೇಳದಿದ್ದರೂ, ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಈ.ಡಿ ಪ್ರವೇಶ ಮಾಡಿತು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಈ.ಡಿ ಯವರು ಮಾಧ್ಯಮಗಳ ಮೂಲಕ ಇಂತಹ ಪತ್ರಗಳನ್ನು ದುರುದ್ದೇಶದಿಂದ ಸೋರಿಕೆ ಮಾಡುವ ಮೂಲಕ ಸಾರ್ವಜನಿಕವಾಗಿ ಮುಖ್ಯಮಂತ್ರಿ ಹಾಗೂ ಅವರ ಕುಟುಂಬದವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಳೆ(ಡಿ.5) ಹೈಕೋರ್ಟ್‍ನಲ್ಲಿ ವಿಚಾರಣೆ ಇದೆ. ಇವತ್ತು ಈ.ಡಿ.ಯವರು ದಿಲ್ಲಿಯಲ್ಲಿ ಮಾಧ್ಯಮಗಳಿಗೆ ಲೋಕಾಯುಕ್ತಕ್ಕೆ ಬರೆದಿರುವ ಪತ್ರವನ್ನು ಸೋರಿಕೆ ಮಾಡಿದ್ದಾರೆ. ಮುಡಾದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ಹಂಚಿಕೆಯಾಗಿದ್ದು, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ. ಆಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ನಿವೇಶನಗಳನ್ನು ಪ್ರಭಾವ ಬೀರಿ ಪಡೆದುಕೊಂಡಿದ್ದರೆ, ಈ ಪತ್ರದ ಪ್ರಕಾರ ಇದರಲ್ಲಿ ಬಸವರಾಜ ಬೊಮ್ಮಾಯಿ ಕೂಡ ಶಾಮೀಲಾಗಬೇಕಲ್ಲವೇ? ಎಂದು ಅವರು ಪ್ರಶ್ನಿಸಿದರು.

ವಿಪಕ್ಷಗಳ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಬಹಿರಂಗಪಡಿಸುವ ಈ.ಡಿ., ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ವಿರುದ್ಧದ ಪ್ರಕರಣವನ್ನು ಮಾತ್ರ ಬಹಿರಂಗಪಡಿಸುವುದಿಲ್ಲ ಏಕೆ? ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ, ಮಹಾರಾಷ್ಟ್ರದ ಅಜಿತ್ ಪವಾರ್ ವಿರುದ್ಧದ ಪ್ರಕರಣಗಳೆಲ್ಲ ಎಲ್ಲಿ ಹೋಯಿತು? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಈ.ಡಿ 5906 ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದೆ. ಇದರಲ್ಲಿ ಕೇವಲ 31 ಪ್ರಕರಣಗಳು ಮಾತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಹೋಗಿವೆ. ರಾಜ್ಯದ ಬಿಜೆಪಿ ನಾಯಕರು ದಿಲ್ಲಿಗೆ ಹೋಗಿರೋದು ಅವರಲ್ಲಿನ ಭಿನ್ನಮತ ಸರಿಪಡಿಸಲು ಅಲ್ಲ, ಈ ಪತ್ರವನ್ನು ಸೋರಿಕೆ ಮಾಡಿಸಲು ಇರಬಹುದು. ವಿಷಯಾಂತರ ಮಾಡುವಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಅವರು ಟೀಕಿಸಿದರು.

ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ, ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ವಿಚಾರಣಾ ಆಯೋಗ ಮಧ್ಯಂತರ ವರದಿ ನೀಡಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಿರುವುದು ಹಾಗೂ ಬಿಜೆಪಿಯಲ್ಲಿನ ಗುಂಪುಗಾರಿಕೆ ವಿಚಾರದಿಂದ ಜನರ ಗಮನ ಬೇರೆ ಕಡೆ ಸೆಳೆಯಲು ಈ ಪತ್ರವನ್ನು ಸೋರಿಕೆ ಮಾಡಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ದೂರಿದರು.

ಜನ ನಮಗೆ ಗ್ಯಾರಂಟಿ ಪರ, ಅಭಿವೃದ್ಧಿಗಾಗಿ ಮತ ಹಾಕಿದ್ದಾರೆ. ಇದನ್ನು ಬಿಜೆಪಿ ಸಹಿಸುತ್ತಿಲ್ಲ. ಈ.ಡಿ ಪತ್ರ ಸೋರಿಕೆ ಪ್ರಕರಣವನ್ನು ಕಾನೂನುನಾತ್ಮಕವಾಗಿ ಹಾಗೂ ರಾಜಕೀಯವಾಗಿ ಎದುರಿಸುತ್ತೇವೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ, ಈ.ಡಿ ಈ ಪ್ರಕರಣದಲ್ಲಿ ಆರಂಭದಿಂದಲೂ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆ, ದೇಶದ ಯಾವುದೇ ಕಾಯ್ದೆಯಲ್ಲೂ ಈ.ಡಿ ಈ ಪ್ರಕರಣದಲ್ಲಿ ಬರಲು ಸಾಧ್ಯವಿಲ್ಲ. ಮುಡಾದಲ್ಲಿ ಈ.ಡಿ. ರಾಜಕೀಯ ಪ್ರೇರಿತ ತನಿಖೆ ನಡೆಸುತ್ತಿದೆ ಎಂದು ದೂರಿದರು.

ಲೋಕಾಯುಕ್ತ ತನಿಖೆ ವಿಚಾರದಲ್ಲಿ ಮಾಹಿತಿ ಕೊಡಲು ಈ.ಡಿಗೆ ಹಕ್ಕು ಇಲ್ಲ. ಮಾರಾಟ ಕರಾರು ಪತ್ರ, ದಾನಪತ್ರ, ನಿವೇಶನಗಳ ಬಗ್ಗೆ ಮಾತನಾಡಲು ಈ.ಡಿಗೆ ಅಧಿಕಾರವೇ ಇಲ್ಲ. ಮುಡಾ ಸ್ವಾಧೀನಕ್ಕೆ ನಿವೇಶನ ವಾಪಸ್ ಕೊಟ್ಟ ವಿಚಾರ ಯಾಕೆ ಈ ಪತ್ರದಲ್ಲಿ ಉಲ್ಲೇಖ ಮಾಡಿಲ್ಲ? ಈ ಪತ್ರದಲ್ಲಿನ ಮಾಹಿತಿ ಒಂದು ತನಿಖೆಯ ಪಾವಿತ್ರ್ಯಕ್ಕೆ ಧಕ್ಕೆ ತರುವಂತಿದೆ. ಪಾವರ್ತಿಯವರು ಈಗಾಗಲೇ ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಈ.ಡಿ ಏನು ತನಿಖೆ ಮಾಡುತ್ತಿದೆ ಎಂದು ಪೊನ್ನಣ್ಣ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News