ಮುಡಾ ನಿವೇಶನ ಹಂಚಿಕೆ ವಿಚಾರ | ಮೈಸೂರು ಪಾದಯಾತ್ರೆ ಮುಂದೂಡಿಕೆ : ಜೆಡಿಎಸ್
ಬೆಂಗಳೂರು : ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಸಹಯೋಗದೊಂದಿಗೆ ನಡೆಸಲು ಮುಂದಾಗಿದ್ದ ಮೈಸೂರು ಪಾದಯಾತ್ರೆಯನ್ನು ಮುಂದೂಡಿಕೆ ಮಾಡಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಸಭೆ ತೀರ್ಮಾನ ಮಾಡಿದೆ.
ಮಂಗಳವಾರ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಹಲವೆಡೆ ಮುಂಗಾರು ಮಳೆ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಪ್ರಾರಂಭವಾದರೆ, ಕೆಲವೆಡೆ ತೀವ್ರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿ ಜನ ಸಂಕಷ್ಟಕ್ಕೆ ಸಿಲುಕಿರುವುದರಿಂದ ಸರಕಾರ ವಿರುದ್ಧ ಹಮ್ಮಿಕೊಂಡಿರುವ ಪಾದಯಾತ್ರೆ ಮುಂದೂಡಲು ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ‘ಪಕ್ಷದ ಸ್ಥಳೀಯ ಮುಖಂಡ ಅಭಿಪ್ರಾಯಗಳ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ. ಅಂತೆಯೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪಾದಯಾತ್ರೆಯ ದಿನಾಂಕವನ್ನು ಮುಂದೂಡಿಕೆಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಪಕ್ಷದ ಸ್ಥಳೀಯ ನಾಯಕರು ಪಾದಯಾತ್ರೆ ಮುಂದೂಡಿಕೆಗೆ ಒತ್ತಡ ಹಾಕಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ರೈತರು ಉಳುಮೆ ಕಾರ್ಯದಲ್ಲಿ ತೊಡಗಿರುತ್ತಾರೆ. ಅಲ್ಲದೇ, ಕೆಲವೆಡೆ ತೀವ್ರತರ ಮಳೆಯಿಂದಾಗಿ ಪ್ರವಾಹ ಭೀತಿ ತಲೆದೋರಿದ್ದು, ಜನತೆ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಜನಪ್ರತಿನಿಧಿಗಳಾಗಿ ಜನತೆಯ ಜತೆ ನಿಲ್ಲಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆಯ ದಿನವನ್ನು ಮುಂದೂಡಿಕೆ ಮಾಡಬೇಕು ಎಂಬ ಆಗ್ರಹ ಇದೆ ಎಂದು ಅವರು ಉಲ್ಲೇಖಿಸಿದರು.
ಇನ್ನೂ, ಮುಡಾ ವಿಚಾರ ಸಂಬಂಧ ಕಾಂಗ್ರೆಸ್ ವಿರುದ್ಧ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಜನರ ಹಿತಾಸಕ್ತಿಯಿಂದಾಗಿ ಪಾದಯಾತ್ರೆ ಮುಂದೂಡಿಕೆ ಮಾಡುವುದು ಒಳಿತು ಎಂಬುದು ಕೋರ್ ಕಮಿಟಿಯ ನಿರ್ಣಯವಾಗಿದೆ. ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ವರಿಷ್ಠರ ಮನವರಿಕೆ ಮಾಡಿಕೊಡಲಾಗುವುದು. ಪಕ್ಷದ ಸ್ಥಳೀಯ ಅಭಿಪ್ರಾಯಗಳನ್ನು ಮುಂದಿಟ್ಟು ತಿಳಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಶಾಸಕ ಸಾ.ರಾ.ಮಹೇಶ್, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಸೇರಿದಂತೆ ಪ್ರಮುಖರಿದ್ದರು.