ಮೂಡಿಗೆರೆ | ಪೆಟ್ರೋಲ್ ಹಾಕುವ ವಿಚಾರಕ್ಕೆ ಸಿಬ್ಬಂದಿಯೊಂದಿಗೆ ವಾಗ್ವಾದ; ದಲಿತ ಯುವಕನಿಗೆ ಗಂಭೀರ ಹಲ್ಲೆ: ಪ್ರಕರಣ ದಾಖಲು

Update: 2023-09-01 16:20 GMT

ಚಿಕ್ಕಮಗಳೂರು, ಸೆ.1: ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ಹಾಕುವ ಕ್ಷುಲ್ಲಕ ವಿಚಾರಕ್ಕೆ ಕುಪಿತನಾದ ಯುವಕನೊಬ್ಬ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುವ ದಲಿತ ಯುವಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮನಬಂದಂತೆ ಥಳಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಶುಕ್ರವಾರ ವರದಿಯಾಗಿದೆ.

ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿ ವಿರುದ್ಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶುಕ್ರವಾರ ಸಂಜೆ ಮಧು ಎಂಬ ಯುವಕ ಗೋಣಿಬೀಡು ಗ್ರಾಮದಲ್ಲಿರುವ ಪೆಟ್ರೋಲ್ ಬಂಕ್‍ಗೆ ತನ್ನ ಕಾರಿನೊಂದಿಗೆ ಬಂದು ಅಲ್ಲಿದ್ದ ಸಿಬ್ಬಂದಿಯೊಬ್ಬರ ಬಳಿ ಪೆಟ್ರೋಲ್ ಹಾಕಲು ಹೇಳಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಸಿಬ್ಬಂದಿಯ ಕೆಲಸದ ಅವಧಿ ಮುಗಿದಿದ್ದರಿಂದ ಮತ್ತೋರ್ವ ಮಹಿಳಾ ಸಿಬ್ಬಂದಿ ಪೆಟ್ರೋಲ್ ಹಾಕುತ್ತಾರೆಂದು ಹೇಳಿ ಹೊರಟಿದ್ದಾನೆ. ಇಷ್ಟಕ್ಕೆ ಕುಪಿತನಾದ ಮಧು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಇದನ್ನು ಕಂಡ ಪೆಟ್ರೋಲ್ ಬಂಕ್ ಮೇಲ್ವಿಚಾರಕ ಚಂದನ್ ಎಂಬ ದಲಿತ ಯುವಕ ಇಬ್ಬರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಈ ವೇಳೆ ಮತ್ತಷ್ಟು ಕುಪಿತನಾದ ಮಧು, ಅವಾಚ್ಯಶಬ್ಧಗಳಿಂದ ಚಂದನ್‍ನನ್ನು ನಿಂಧಿಸಿ ಕಾರಿನಲ್ಲಿದ್ದ ಬ್ಯಾಟ್‍ನಿಂದ ಕೈಕಾಲು, ಕುತ್ತಿಗೆಗೆ ಹಲ್ಲೆ ಮಾಡಿದ್ದಾನೆನ್ನಲಾಗಿದೆ.

ಸ್ಥಳದಲ್ಲಿದ್ದವರು ಆರೋಪಿಯನ್ನು ಸಮಾಧಾನ ಪಡಿಸಿದರೂ ಚಂದನ್‍ನನ್ನು ನೆಲಕ್ಕೆ ಕೆಡವಿಕೊಂಡು ಹಲ್ಲೆ ಮಾಡಿದ್ದಾನೆ. ಘಟನೆಯಿಂದ ತೀವ್ರವಾಗಿ ಗಾಯಗೊಂಡಿರುವ ದಲಿತ ಯುವಕ ಚಂದನ್ ಮೂಡಿಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿ ಮಧು ವಿರುದ್ಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮಧು ನಾಪತ್ತೆಯಾಗಿದ್ದಾನೆಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News