'ಆಪರೇಷನ್ ಕಮಲ' ಅಗತ್ಯವಿಲ್ಲ, ಸ್ವಲ್ಪ ದಿನ ಕಾದು ನೋಡಿ ಎಂದ ಮುರುಗೇಶ್ ನಿರಾಣಿ

Update: 2023-11-12 13:24 GMT

ಹುಬ್ಬಳ್ಳಿ, ನ. 12: ‘ರಾಜ್ಯದಲ್ಲಿ ಆಡಳಿತದಲ್ಲಿರುವುದು ಕಾಂಗ್ರೆಸ್ ಸರಕಾರವಲ್ಲ, ಬದಲಿಗೆ ಮೈತ್ರಿ ಸರಕಾರ. ಇವರ ಜಗಳದಲ್ಲಿಯೇ ಸರಕಾರ ಬಿದ್ದು ಹೋಗಲಿದೆ. ಹೀಗಾಗಿ ನಾವು ಆಪರೇಷನ್ ಕಮಲ ಮಾಡುವ ಅಗತ್ಯವಿಲ್ಲ, ಸ್ವಲ್ಪ ದಿನ ಕಾದು ನೋಡಿ’ ಎಂದು ಮಾಜಿ ಸಚಿವ ಮುರುಗೇಶ್ ಆರ್. ನಿರಾಣಿ ಭವಿಷ್ಯ ನುಡಿದಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಸರಕಾರ ಐದು ವರ್ಷ ಇರಲಿ ಎಂಬುದು ನಮ್ಮ ಅಪೇಕ್ಷೆ. ಆದರೆ, ಅದಕ್ಕೂ ಮೊದಲೇ ಬಿದ್ದು ಹೋದರೆ ನಾವೇನು ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಅವರ ಅಲಯನ್ಸ್ ಸರಕಾರ. ಇದರ ನೇತೃತ್ವ ಮಾತ್ರ ಸಿದ್ದರಾಮಯ್ಯನವರ ಕೈಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

ಯುವಕರಿಗೆ ಮನ್ನಣೆ: ಬಹಳ ದಿನಗಳಿಂದ ಖಾಲಿಯಿದ್ದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ನಾಯಕರು ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡಿದನ್ನು ಸ್ವಾಗತ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ತಳಮಟ್ಟದಿಂದ ಪಕ್ಷ ಸಂಘಟಿಸಿ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20ಕ್ಕೂ ಹೆಚ್ಚು ಸ್ಥಾನ ಗಳಿಸಿ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲಾಗುವುದು ಎಂದ ಅವರು, ಪಕ್ಷದ ವರಿಷ್ಠರ ವಿಜಯೇಂದ್ರ ನೇಮಕದ ಮೂಲಕ ಯುವಕರಿಗೆ ಮನ್ನಣೆ ನೀಡಿದ್ದಾರೆ ಎಂದು ಸಮರ್ಥಿಸಿದರು.

ಬಿಜೆಪಿ ದೊಡ್ಡ ಪಕ್ಷ, ಅಸಮಾಧಾನ ವ್ಯಕ್ತವಾಗುವುದು ಸಹಜ. ಈ ದಿಸೆಯಲ್ಲಿ ನಮ್ಮ ರಾಷ್ಟ್ರೀಯ ನಾಯಕರು ಅಸಮಾಧಾನಗೊಂಡವನ್ನು ಕರೆಸಿ ಮಾತನಾಡಿ ಅಸಮಾಧಾನ ಹೊಗಲಾಡಿಸುತ್ತಾರೆ. ಇದರ ಜೊತೆಗೆ ಯಾವುದೇ ಹಿರಿಯರನ್ನು ಕಡೆಗಣಿಸುವ ಪ್ರಶ್ನೆ ಪಕ್ಷದಲ್ಲಿಲ್ಲ ಎಂದು ನಿರಾಣಿ ಸ್ಪಷ್ಟಣೆ ನೀಡಿದರು.

ಸ್ಪರ್ಧೆಯಲ್ಲಿ ಆಸಕ್ತಿಯಿಲ್ಲ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಬಾಗಲಕೋಟೆ ಲೋಕಸಭೆ ಕ್ಷೇತ್ರದ ಆಕಾಂಕ್ಷಿ ಅಲ್ಲ. ನಾನು ರಾಜ್ಯದ ರಾಜಕಾರಣದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೇನೆ. ಆದರೆ ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News