ಮುರುಘಾಶ್ರೀ ಜಾಮೀನು ಅರ್ಜಿ; ಆದೇಶ ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ನ.1: ಪೊಕ್ಸೊ ಕಾಯಿದೆಯಡಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ಜಾಮೀನು ಅರ್ಜಿ ವಿಚಾರಣೆಯನ್ನು ಮುಕ್ತಾಯಗೊಳಿಸಿರುವ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.
ಜಾಮೀನು ಕೋರಿ ಶಿವಮೂರ್ತಿ ಶ್ರೀಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ನಡೆಸಿತು.
ವಿಚಾರಣೆ ವೇಳೆ ಒಡನಾಡಿ ಸೇವಾ ಸಂಸ್ಥೆ ಪರ ವಕೀಲ ಡಿ.ಸಿ.ಶ್ರೀನಿವಾಸ್ ಅವರು ವಾದಿಸಿ, ಆರೋಪಿ ಮುರುಘಾ ಶರಣರು ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ನೀಡಿದರೆ ಸಂತ್ರಸ್ತ ಬಡ ಮಕ್ಕಳಿಗೆ ಬೆದರಿಕೆ ಎದುರಾಗುವ ಸಾಧ್ಯತೆ ಇದೆ ಎಂದು ಪೀಠಕ್ಕೆ ತಿಳಿಸಿದರು.
ಅಲ್ಲದೆ, ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿರುವ ಶರಣರ ನಡೆ ಮ್ಯಾಜಿಸ್ಟ್ರೇಟರ ಮುಂದೆ ಬಾಲಕಿಯರು ನೀಡಿರುವ ಹೇಳಿಕೆಯಲ್ಲಿ ಸಂಪೂರ್ಣ ಬಿಂಬಿತವಾಗಿದೆ. ನ್ಯಾಯಪೀಠ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪೀಠಕ್ಕೆ ಕೋರಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ ನ.8ರಂದು ಆದೇಶ ಪ್ರಕಟಿಸುವ ಸಂಭಾವ್ಯ ದಿನಾಂಕವನ್ನು ಪ್ರಕಟಿಸಿದೆ.
ಪ್ರಕರಣವೇನು?: ಮುರುಘಾ ಮಠದ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ನಡೆಸುತ್ತಿರುವ ಅಪ್ರಾಪ್ತ ವಿದ್ಯಾರ್ಥಿನಿಯರು ನಮ್ಮ ಮೇಲೆ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮೈಸೂರಿನ ನಝರಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆ. 26ರಂದು ದೂರು ದಾಖಲಿಸಿದ್ದರು. ನಂತರ ಶರಣರನ್ನು 2022ರ ಸೆ.1ರಂದು ಪೊಲೀಸರು ಬಂಧಿಸಿದ್ದರು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.