ʼಹಿಂದುಳಿದ ಹಣೆಪಟ್ಟಿ ಹೋಗಲಾಡಿಸುವುದೇ ನನ್ನ ಗುರಿʼ: KKRDB ಅಧ್ಯಕ್ಷರಾಗಿ ಶಾಸಕ ಡಾ.ಅಜಯ್ ಸಿಂಗ್ ಅಧಿಕಾರ ಸ್ವೀಕಾರ

Update: 2023-08-14 15:34 GMT

ಕಲಬುರಗಿ: ಕಣ್ಣಿಗೆ ಕಾಣುವಂತೆ ಬದಲಾವಣೆಯ ಮ್ಯಾಕ್ರೋ ಯೋಜನೆಗಳನ್ನು ಪ್ರದೇಶದಲ್ಲಿ ಅನುಷ್ಠಾನಕ್ಕೆ ತರುವ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅಂಟಿಕೊಂಡಿರುವ ಹಿಂದುಳಿದ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸುವುದೇ ತಮ್ಮ ಮೊದಲ ಗುರಿ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜೇವರ್ಗಿ ಶಾಸಕರಾಗಿರುವ ಡಾ.ಅಜಯ್ ಸಿಂಗ್ ಹೇಳಿದರು.

ಸೋಮವಾರ ಮಂಡಳಿ ಕಚೇರಿಯಲ್ಲಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಪ್ರದೇಶದದಲ್ಲಿನ ಸಾಕ್ಷರತೆ ಪ್ರಮಾಣ ಹೆಚ್ಚಿಸುವುದು, ಅಪೌಷ್ಟಿಕತೆ ನಿವಾರಣೆ, ತಾಯಿ-ಮಕ್ಕಳ ಮರಣ ಪ್ರಮಾಣ ತಗ್ಗಿಸುವುದರ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸುವುದು. ಮೂಲಸೌಕರ್ಯ ಬಲಪಡಿಸುವುದು ತಮ್ಮ ಮೊದಲ ಆದ್ಯತೆಯಾಗಿರಲಿದೆ ಎಂದರು.

ರಾಜ್ಯದ ಈ ಹಿಂದಿನ 175 ತಾಲೂಕುಗಳಲ್ಲಿ 114 ತಾಲೂಕು ಹಿಂದುಳಿದ ತಾಲೂಕುಗಳಾಗಿವೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿರುವುದು 39 ತಾಲೂಕು ಎಂದು ಡಾ.ಡಿ.ಎಂ.ನಂಜುಂಡಪ್ಪ ಅವರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಪ್ರದೇಶದ ಪ್ರತಿ ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಟ್ರಾಮಾ ಸೆಂಟರ್ ಸ್ಥಾಪನೆ ಮಾಡಲಾಗುವುದು. ರಾಜ್ಯದ ಸಾಕ್ಷರತೆ ಪ್ರಮಾಣ ಶೇ.75.36 ಇದ್ದರೆ, ಕ.ಕ. ಭಾಗದ ಪ್ರಮಾಣ ಶೇ.64 ಇದೆ. ಈ ವ್ಯತ್ಯಾಸವನ್ನು ಸರಿದೂಗಿಸಲು ಪ್ರತಿ ಹೋಬಳಿವಾರು ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪಿಸಲು ಪ್ರಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

ಮಂಡಳಿಗೆ ಸರ್ಕಾರ ನೀಡುವ ಅನುದಾನ ಖರ್ಚು ಮಾಡದಿರುವುದು ಮಂಡಳಿಗೆ ದೊಡ್ಡ ಸವಾಲು ಮತ್ತು ಆಪಾದನೆ ಇದೆ. ಇದನ್ನು ತಮ್ಮ ಅವಧಿಯಲ್ಲಿ ಮುಂದುವರೆಯಲು ಬಿಡುವುದಿಲ್ಲ. ಮಂಡಳಿಗೆ ಅಧಿಕಾರಿ-ಸಿಬ್ಬಂದಿ, ಇಂಜಿನೀಯರ್ ಕೊರತೆ ಇರುವುದು ಗಮನಕ್ಕೆ ಬಂದಿದೆ. ಹಣಕಾಸು ಇಲಾಖೆ ಅನುಮೋದನೆ ಪಡೆದು ಸಿಬ್ಬಂದಿ ಭರ್ತಿ ಮಾಡಲಾಗುವುದು. ಮುಂದೆ ಅನುದಾನವನ್ನು ಸಹ ಕಾಲಮಿತಿಯಲ್ಲಿ ಖರ್ಚು ಮಾಡಲಾಗುವುದು ಎಂದರು

ಶುಭಕೋರಿದ ಗಣ್ಯರು

ಇದಕ್ಕೂ ಮುನ್ನ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ.ಅಜಯ್ ಸಿಂಗ್ ಅವರಿಗೆ ಮಂಡಳಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ಅವರು ಶಿಷ್ಠಾಚಾರದಂತೆ ನೂತನ ಅಧ್ಯಕ್ಷರಿಗೆ ಹೂಗುಚ್ಛ ನೀಡಿ ಶುಭ ಕೋರಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆದಿಯಾಗಿ ಶಾಸಕರು, ಮುಖಂಡರು ನೂತನ ಅಧ್ಯಕ್ಷರನ್ನು ಶುಭ ಕೋರಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ʼʼಕೆಕೆಆರ್ಡಿಬಿಗೆ ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಮಾತನ್ನು ನಾನೂ ಹೇಳಿದ್ದೆ. ಆದರೆ ಸಿಎಂ ಅವರ ವಿವೇಚನಾ ಅಧಿಕಾರ ಬಳಸಿ ಅವರನ್ನು ( ಅಜಯ್ ಸಿಂಗ್ ) ನೇಮಿಸುವ ಸಂದರ್ಭ ಬಂದಾಗ ನಾವೆಲ್ಲ ಶಾಸಕರು ಅವರಿಗೆ ಬೆಂಬಲ ಸೂಚಿಸಿದೆವು. ಕೆಕೆಆರ್ಡ್ಬಿಯನ್ನು ಮತ್ತೆ ಸುಭದ್ರ ಸ್ಥಿತಿಗೆ ತರುವ ಉದ್ದೇಶವಿದೆ. " ಕೆಕೆಆರ್ ಡಿಬಿಗೆ ನಿಗದಿಪಡಿಸಿದ ಅನುದಾನವನ್ನು ಬಳಸಿಕೊಂಡು ಈ ಭಾಗದ ಅಭಿವೃದ್ದಿಗೆ ಅಜಯ್ ಸಿಂಗ್ ಅವರ ನೇತೃತ್ವದಲ್ಲಿ ನಾವೆಲ್ಲರೂ ಸಹಕಾರ ನೀಡಲಿದ್ದೇವೆ " ಎಂದು ಹೇಳಿದರು.

ʼʼಅಜಯ್ ಸಿಂಗ್ ಅವರು ಒಂದು‌ ಯೋಜನೆ ಹಾಕಿಕೊಂಡಿದ್ದು ಕಕ‌ ಭಾಗದ ಅಭಿವೃದ್ದಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಲಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆʼʼ ಎಂದು ಸಚಿವರು ಹೇಳಿದರು.



ʼʼಮುಂದಿನ ವಾರದಲ್ಲಿ ಮಂಡಳಿ ಸಭೆ: ಡಾ.ಅಜಯ್ ಸಿಂಗ್

ಮಂಡಳಿಗೆ ಈಗಾಗಲೇ ನನ್ನನ್ನು ಹೊರತುಪಡಿಸಿ 10 ಜನ ಸದಸ್ಯರನ್ನು ಸರ್ಕಾರ ನೇಮಕ ಮಾಡಿದೆ. ಮುಂದಿನ ವಾರವೇ ಮಂಡಳಿ ಸಭೆ ಕರೆದು, ಪ್ರಸಕ್ತ ವರ್ಷದ ಕ್ರಿಯಾ ಯೋಜನೆ ಸಿದ್ದಪಡಿಸುವ ಕುರಿತಂತೆ ಚರ್ಚಿಸಲಾಗುವುದು. ಇದಕ್ಕೂ ಪೂರ್ವ ಪ್ರದೇಶದ ಸಚಿವರೊಂದಿಗೆ ಚರ್ಚಿಸಿ ಸಲಹೆ ಪಡೆಯಲಾಗುವುದು. ತದನಂತರ 15 ದಿನದಲ್ಲಿ ಪ್ರದೇಶದ ಶಾಸಕರಿಂದ ಮಾಹಿತಿ ಪಡೆದು ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದ ಅವರು, ಪ್ರತಿ ಮೂರು ತಿಂಗಳಿಗೊಮ್ಮೆ ಮಂಡಳಿ ಸಭೆ ಕರೆಯಲಾಗುವುದೆಂದು ಅಜಯ್ ಸಿಂಗ್ ತಿಳಿಸಿದರು.

ʼʼ5,000 ಕೋಟಿ ಅನುದಾನ ತರುವುದು ಶತಸಿದ್ಧʼʼ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ಘೋಷಿಸುವ 5,000 ಕೋಟಿ ಅನುದಾನವನ್ನು ಮಂಡಳಿಗೆ ತರುವುದು ಶತಸಿದ್ಧ. ಪಂಚ ಗ್ಯಾರಂಟಿ ಅನುಷ್ಟಾನ ಮತ್ತು ಮಂಡಳಿ ಅನುದಾನ ಬಿಡುಗಡೆಗೆ ಯಾವುದೇ ಸಂಬಂಧವಿಲ್ಲ. ನಮ್ಮ ಸರ್ಕಾರದ ನುಡಿದಂತೆ ನಡೆಯಲಿದೆ. ಅದರಂತೆ‌ ಅನುದಾನ ಬರಲಿದೆ‌ ಇದರಲ್ಲಿ ಯಾವುದೇ ಆತಂಕ ಬೇಡ ಎಂದರು.




 



Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News