ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಅಪೂರ್ಣ: ಎಡಿಜಿಪಿ ಅಲೋಕ್ ಕುಮಾರ್

Update: 2023-07-26 15:29 GMT

ಮೈಸೂರು,ಜು.26: ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಅಪೂರ್ಣವಾಗಿದೆ ಎಂದು ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದ್ದಾರಿಯಲ್ಲಿ ಸುಮಾರು 25 ಅಪಘಾತ ವಲಯಗಳು ಇವೆ.ಎಲ್ಲ ಕಡೆಗೆ ನಾನು ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ.ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕಾಮಗಾರಿಗಳು ಬಾಕಿ ಇವೆ.ಸಿಸಿ ಕ್ಯಾಮರಾಗಳ ಅಳವಡಿಕೆ ಬಾಕಿ ಇದೆ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರನ್ನು ಕೇಳಿ ಕಾಮಗಾರಿ ಮಾಡಿಲ್ಲ. ಸಮಸ್ಯೆ ಆದಾಗ ಸರಿ ಮಾಡಿ ಅಂತ ನಮ್ಮನ್ನು ಕರೆಯುತ್ತಾರೆ ಎಂದರು.

ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಹಲವಾರು ಸಮಸ್ಯೆಗಳು ಅನೇಕ ಕಾಮಗಾರಿಗಳು ಬಾಕಿ ಉಳಿದಿವೆ. ಈಗಾಗಲೇ ಹೆದ್ದಾರಿ ಉದ್ಘಾಟನೆ ಆಗಿದೆ.ಬಾಕಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ತಂದು ಕೆಲಸ ಮಾಡಿಸುವುದು ಎನ್‍ಎಚ್‍ಎಐ ಅಧಿಕಾರಿಗಳ ಕೆಲಸ.ಸರ್ಕಾರದ ನಿಯಮಗಳ ಪ್ರಕಾರ ಪ್ರಸ್ತಾವನೆ, ಟೆಂಡರ್ ಮಾಡಿ ಕೆಲಸ ಮಾಡಿಸಬೇಕಿದೆ ಎಂದು ಅಲೋಕ್ ಕುಮಾರ್ ಸ್ಪಷ್ಟಪಡಿಸಿದರು.

ಸೋಷಿಯಲ್ ಮೀಡಿ ಬಳಕೆದಾರರಿಗೆ ಎಡಿಜಿಪಿ ಧನ್ಯವಾದ: ಸೋಷಿಯಲ್ ಮೀಡಿಯಾಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.

ಹಿಂದೆಲ್ಲ ಪೊಲೀಸರನ್ನು ಮೂರನೇ ಕಣ್ಣು ಅನ್ನುತ್ತಿದ್ದರು. ಈಗ ಪೊಲೀಸರಿಗೆ ಸಾವಿರ ಕಣ್ಣುಗಳಿವೆ.ಹುಡುಗರು ವ್ಹೀಲಿಂಗ್ ಮಾಡಿ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತಾರೆ.ಪೊಲೀಸರು ಸೋಷಿಯಲ್ ಮೀಡಿಯಾ ನೋಡುತ್ತಿರುತ್ತಾರೆ.ವಿಡಿಯೋ ನೋಡಿ ಕೇಸ್ ಹಾಕುತ್ತಾರೆ.ಒಂದು ರೀತಿಯಲ್ಲಿ ಸೋಷಿಯಲ್ ಮೀಡಿಯಾಗಳ ಕ್ರೇಜ್‍ನಿಂದ ಪೊಲೀಸರಿಗೆ ಅನುಕೂಲ ಆಗಿದೆ ಎಂದರು.

ಬಹುತೇಕರು ಟ್ರಾಫಿಕ್ಸ್ ರೂಲ್ಸ್ ಬಗ್ಗೆ ಉದ್ದುದ್ದ ಪೋಸ್ಟ್ ಹಾಕುತ್ತಾರೆ, ಟ್ವೀಟ್ ಮಾಡುತ್ತಾರೆ. ಅಂಥವರೇ ಹೆಚ್ಚಾಗಿ ರೂಲ್ಸ್ ಬ್ರೇಕ್ ಮಾಡುತ್ತಾರೆ. ಮೊದಲೆಲ್ಲ ನಿಯಮ ಉಲ್ಲಂಘಿಸುವವರು ಪೊಲೀಸರ ವಾಹನ ನೋಡಿಕೊಳ್ಳುತ್ತಿದ್ದರು. ಈಗ ಕಾರುಗಳಲ್ಲೇ ಬೋರ್ಡ್ ಕ್ಯಾಮರಾಗಳು ಇರುತ್ತವೆ. ಜನ ಕೂಡ ರೂಲ್ಸ್ ಉಲ್ಲಂಘಿಸುವವರನ್ನು ವಿಡಿಯೋ ಮಾಡಿ ಪೊಲೀಸರಿಗೆ ಕಳುಹಿಸುತ್ತಿದ್ದಾರೆ. ಅವುಗಳ ಆಧಾರದ ಮೇಲೆಯೂ ಕೇಸ್ ಹಾಕುತ್ತಿದ್ದೇವೆ. ಪೊಲೀಸರ ಕಣ್ತಪ್ಪಿಸುವುದು ಸವಾರರ ಸಾಧನೆ ಆಗಬಾರದು. ದಂಡ ಹಾಕುವುದಕ್ಕಿಂತ ಜೀವ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಅಲೋಕ್ ಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News