ಮೈಸೂರು: ಒಂದೂವರೆ ವರ್ಷದ ಮಗುವನ್ನು ಹತ್ಯೆಗೈದ ತಂದೆ
ಮೈಸೂರು,ಅ. 19: ಒಂದೂವರೆ ವರ್ಷದ ಗಂಡು ಮಗುವನ್ನು ತಂದೆಯೊಬ್ಬ ಕೆರೆಗೆ ಎಸೆದು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದಲ್ಲಿ ವರದಿಯಾಗಿದೆ.
ಮಗುವನ್ನು ಹತ್ಯೆಗೈದ ಆರೋಪಿಯನ್ನು ಗಣೇಶ್ (30) ಎಂದು ಗುರುತಿಸಲಾಗಿದೆ.
2014 ರಲ್ಲಿ ಬೆಂಗಳೂರು ಜಿಲ್ಲೆ ದೇವನಹಳ್ಳಿ ತಾಲೂಕು ದೊಡ್ಡಸನ್ನೆ ಗ್ರಾಮದ ನಾರಾಯಣಸ್ವಾಮಿ ಅವರ ಮಗಳು ಲಕ್ಷ್ಮಿ ಎಂಬಾಕೆಯನ್ನು ಪಿರಿಯಾಪಟ್ಣದ ಗಣೇಶ್ ವಿವಾಹವಾಗಿದ್ದ. ಈತನಿಗೆ ಹಾರಿಕಾ ಮತ್ತು ದೀಕ್ಷಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ಮೂರನೇ ಮಗು ಹುಟ್ಟುವಾಗ ಈತನ ಪತ್ನಿ ಲಕ್ಷ್ಮಿ ಸಾವನ್ನಪ್ಪಿದ್ದಳು ಎಂದು ಹೇಳಲಾಗಿದೆ.
ಗಂಡು ಮಗುವನ್ನು ನಾವೇ ಸಾಕುತ್ತೇವೆ ಎಂದು ಅತ್ತೆ ಮನೆಯವರು ಹೇಳಿದರೂ, ಅವರ ಮಾತನ್ನು ಕೇಳದೇ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಅತ್ತೆಯ ಮನೆಯಲ್ಲೇ ಬಿಟ್ಟ ಗಣೇಶ್, ತನ್ನ ಒಂದೂವರೆ ವರ್ಷದ ಗಂಡು ಮಗುವನ್ನು ಪಿರಿಯಾಪಟ್ಟಣದ ಮಾಕೋಡಿಗೆ ಕರೆದುಕೊಂಡು ಬಂದು ಕರೆಗೆ ಎಸೆದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಪಿರಿಯಾಪಟ್ಟಣ ಪೊಲೀಸರು ಆರೋಪಿ ಗಣೇಶ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.