ಮೈಸೂರು | ಹನುಮ ಜಯಂತಿ ವೇಳೆ ಯುವಕನ ಕೊಲೆ ಪ್ರಕರಣ: ಇಬ್ಬರ ಬಂಧನ

Update: 2023-07-11 05:59 GMT

ಹತ್ಯೆಗೀಡಾದ ಯುವಕ 

ಮೈಸೂರು: ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ನಡೆದಿದ್ದ ಗಲಾಟೆಯಲ್ಲಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ .

ವೇಣುಗೋಪಾಲ್ ನಾಯಕ್ (32) ಕೊಲೆಯಾದ ಯುವಕನಾಗಿದ್ದು, ಈತ ಟಿ.ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿ ನಿವಾಸಿಯಾಗಿದ್ದಾನೆ. 

ಮಣಿ ಹಾಗೂ ಸಂದೇಶ್ ಬಂಧಿತ ಆರೋಪಿಗಳಾಗಿದ್ದು, ತಲೆ ಮರೆಸಿಕೊಂಡಿರುವ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

''ರವಿವಾರ ನಡೆದ ಹನುಮ ಜಯಂತಿ ಮೆರವಣಿಗೆಯಲ್ಲಿ ಭಾರತಾಂಬೆ ಫೋಟೊ ಮುಂಭಾಗ ನಟ ದಿ.ಪುನೀತ್ ರಾಜ್ ಕುಮಾರ್ ಫೋಟೊ ಇಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಗ ವೇಣುಗೋಪಾಲ ನಾಯಕ್ ಯಾವ ವ್ಯಕ್ತಿಯ ಫೋಟೊ ಹಾಕಬಾರದು ಎಂದು ಫೋಟೊವನ್ನು ತೆಗೆಸಿದ್ದನು.ಈ ವೇಳೆ ಸ್ಥಳದಲ್ಲಿದ್ದ ಕೆಲವರು ಎರಡು ಗುಂಪುಗಳನ್ನು ಸಮಾಧಾನ ಮಾಡಿದ್ದರು. ಬಳಿಕ ರಾತ್ರಿ ರಾಜಿ ಪಂಚಾಯತಿ ನೆಪದಲ್ಲಿ ವೇಣುಗೋಪಾಲ್ ಕರೆಸಿಕೊಂಡು ಕೊಲೆ‌ ಮಾಡಲಾಗಿದೆ'' ಎಂದು ಕೊಲೆಯಾದ ವೇಣುಗೋಪಾಲ್ ಪತ್ನಿ ಪೂರ್ಣಿಮ ಆರೋಪಿಸಿದ್ದಾರೆ.

ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಸೋಮವಾರ ಟಿ.ನರಸೀಪುರ ಬಂದ್ ಗೆ ಕರೆ ನೀಡಿದ್ದರು. ನರಸೀಪುರ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ಜರುಗದಂತೆ ಪೋಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

''ಹನುಮ ಜಯಂತಿ ವೇಳೆ ಟಿ.ನರಸೀಪುರದಲ್ಲಿ ನಡೆದ ಕೊಲೆ ವೈಯಕ್ತಿಕ ವಿಚಾರಕ್ಕೆ ನಡೆದಿರುವುದು. ಯಾವುದೇ ಕೋಮು ಸಂಘರ್ಷ ನಡೆದಿಲ್ಲ, ಕೊಲೆ ಮಾಡಿರುವವರು ಹಿಂದೂಗಳೇ ಆಗಿದ್ದಾರೆ''

- ಸೀಮಾ ಲಾಟ್ಕರ್, ಪೊಲೀಸ್ ವರಿಷ್ಠಾಧಿಕಾರಿ, ಮೈಸೂರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News