ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕ ಕಳವಳಕಾರಿಯಾದದ್ದು : ನಾಸ್‍ಕಾಮ್

Update: 2024-07-17 15:16 GMT

Photo : x/@nasscom

ಬೆಂಗಳೂರು : ಕನ್ನಡಿಗರಿಗೆ ಖಾಸಗಿ ಕೈಗಾರಿಕೆಗಳಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸುವ ಮಸೂದೆ ಕಳವಳಕಾರಿಯಾದದ್ದು. ಇದು ಉದ್ಯಮದ ಬೆಳವಣಿಗೆಗೆ ಧಕ್ಕೆ ತರುತ್ತದೆ. ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್‌ ವೇರ್ ಅಂಡ್ ಸರ್ವೀಸ್ ಕಂಪೆನೀಸ್ (ನಾಸ್‍ಕಾಮ್)ಸಂಘವು ಅಭಿಪ್ರಾಯಪಟ್ಟಿದೆ.

ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ನಾಸ್‍ಕಾಮ್, ತಂತ್ರಜ್ಞಾನ ವಲಯವು ರಾಜ್ಯದ ಜಿಡಿಪಿಗೆ ಶೇ.25ರಷ್ಟು ಕೊಡುಗೆ ನೀಡುತ್ತದೆ. ರಾಜ್ಯವು ಭಾರತದ ಡಿಜಿಟಲ್ ಪ್ರತಿಭೆಯ ಕಾಲು ಭಾಗದಷ್ಟು, ಸುಮಾರು 11 ಸಾವಿರ ನವೋದ್ಯಮಗಳನ್ನು ಹೊಂದಿದೆ. ಈ ಮಸೂದೆಯು ರಾಜ್ಯದ ಪ್ರಗತಿಯನ್ನು ಹಿಮ್ಮೆಟ್ಟಿಸಲು, ಕಂಪೆನಿಗಳನ್ನು ಓಡಿಸಲು ಮತ್ತು ನವೋದ್ಯಮಗಳಿಗೆ ಬೆದರಿಕೆ ಹಾಕುವಂತಿದೆ ಎಂದು ಹೇಳಿದೆ.

ವಿಶೇಷವಾಗಿ ಹೆಚ್ಚಿನ ಜಾಗತಿಕ ಸಂಸ್ಥೆಗಳು(ಜಿಸಿಸಿ) ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿರುವಾಗ, ಸ್ಥಳೀಯ ನುರಿತ ಪ್ರತಿಭೆಗಳ ಕೊರತೆಯಿಂದ ಕಂಪೆನಿಗಳು ಸ್ಥಳಾಂತರಗೊಳ್ಳಬಹುದು. ಆದುದರಿಂದ, ಈ ಮಸೂದೆಗೆ ಸಂಬಂಧಿಸಿದಂತೆ ರಾಜ್ಯದ ಅಧಿಕಾರಿಗಳೊಂದಿಗೆ ಉದ್ಯಮ ಪ್ರತಿನಿಧಿಗಳು ತುರ್ತು ಸಭೆ ನಡೆಸುವಂತೆ ಬಯಸಿದ್ದಾರೆ ಎಂದು ನಾಸ್‍ಕಾಮ್ ತಿಳಿಸಿದೆ.

ಈ ಮಸೂದೆ ಜಾರಿಯಿಂದ ಜಾಗತಿಕ ಮಟ್ಟದಲ್ಲಿ ರಾಜ್ಯಕ್ಕೆ ಇರುವ ಬ್ರ್ಯಾಂಡಿಂಗ್‍ಗೂ ಧಕ್ಕೆ ಆಗಬಹುದು. ಈ ಮಸೂದೆಯಲ್ಲಿರುವ ಅಂಶಗಳ ಬಗ್ಗೆ ನಾಸ್‍ಕಾಮ್ ಸದಸ್ಯರಿಗೆ ಆತಂಕವಿದೆ. ಆದುದರಿಂದ, ಸರಕಾರ ಈ ಮಸೂದೆಯನ್ನು ಹಿಂಪಡೆಯುವಂತೆ ನಾಸ್‍ಕಾಮ್ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News