ಪಠ್ಯಗಳಲ್ಲಿ ‘ಇಂಡಿಯಾ’ ಹೆಸರನ್ನು ‘ಭಾರತ’ ಎಂದು ಬದಲಿಸುವ NCERT ಸಲಹೆ; ಸಂವಿಧಾನಬಾಹಿರ ನಡೆ: ನಿರಂಜನಾರಾಧ್ಯ ವಿ.ಪಿ.
ಬೆಂಗಳೂರು, ಅ.26: ದೇಶದ ಅತ್ಯುನ್ನತ ಶೈಕ್ಷಣಿಕ ಪ್ರಾಧಿಕಾರವಾದ ರಾಷ್ಟ್ರೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಮಂಡಳಿಯು(ಎನ್‍ಸಿಆರ್‍ಟಿ) ಆಡಳಿತರೂಢ ಸರಕಾರದ ಅಂಚೆ ಕಚೇರಿಯಂತೆ ಕಾರ್ಯ ನಿರ್ವಹಿಸುವ ಮಟ್ಟಕ್ಕೆ ಇಳಿದಿರುವುದು ಇಡೀ ಶೈಕ್ಷಣಿಕ ವಲಯ ತಲೆ ತಗ್ಗಿಸುವಂತೆ ಮಾಡಿದೆ ಎಂದು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ.ವಿ.ಪಿ. ಟೀಕಿಸಿದ್ದಾರೆ.
ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಎನ್‍ಸಿಇಆರ್‍ಟಿಯ ಸಮಾಜ ವಿಜ್ಞಾನ ಸಮಿತಿಯು 12ನೆ ತರಗತಿಯವರೆಗಿನ ಎಲ್ಲ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ವನ್ನು ‘ಭಾರತ’ ಎಂದು ಕರೆಯಬೇಕೆಂದು ಸಲಹೆ ನೀಡಿರುವುದು ಅತ್ಯಂತ ಅಘಾತಕಾರಿ ಸಲಹೆಯಾಗಿದೆ ಎಂದರು.
ಇಂಥಹ ಅತ್ಯುನ್ನತ ಸಂಸ್ಥೆಯು ಸಂವಿಧಾನದ ಕನಿಷ್ಠ ಜ್ಞಾನವೂ ಇಲ್ಲದಂತೆ ತನ್ನ ಎಲ್ಲಾ ಸಮಾಜ ವಿಜ್ಞಾನದ ಪಠ್ಯಪುಸ್ತಕಗಳಲ್ಲಿ ಇಂಡಿಯಾ ಎಂಬುದನ್ನು ಭಾರತವನ್ನಾಗಿ ಬದಲಿಸುವ ಸಲಹೆಯನ್ನು ನೀಡಿರುವುದು ಸಂವಿಧಾನಬಾಹಿರ ನಡೆಯಾಗಿದ್ದು, ದೇಶದ್ರೋಹವೆನಿಸಿಕೊಳ್ಳುತ್ತದೆ. ಪರೋಕ್ಷವಾಗಿ ಇದು ಸಂವಿಧಾನವನ್ನೇ ಬದಲಾಯಿಸುವ ಮುನ್ಸೂಚನೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದ ಅತ್ಯುನ್ನತ ಶೈಕ್ಷಣಿಕ ಪ್ರಾಧಿಕಾರವೊಂದು ಆಡಳಿತ ಪಕ್ಷದ ಅಂಗ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿರುವುದ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿದೆ. ಕಳೆದ ಒಂದು ದಶಕದ ಈ ಬೆಳವಣಿಗೆಯು, ಶಾಲಾ ಶಿಕ್ಷಣದಲ್ಲಿ ಧರ್ಮ, ಪುರಾಣ, ಇತ್ಯಾದಿಗಳನ್ನು ಬೆರೆಸುವ ಮೂಲಕ ಶಿಕ್ಷಣವನ್ನು ಕೋಮುವಾದೀಕರಣಗೊಳಿಸುವ ಹುನ್ನಾರವಾಗಿದೆ ಎಂದು ಅವರು ಖಂಡಿಸಿದ್ದಾರೆ.
ಭಾರತದ ಸಂವಿಧಾನ ಸ್ವಾತಂತ್ರ್ಯ ಚಳುವಳಿಯ ಉತ್ಪನ್ನವಾಗಿದ್ದು, ಜನರ ಆಶಯದಂತೆ, ಸಂವಿಧಾನ ರಚನಾ ಸಭೆಯಲ್ಲಿ ವ್ಯಾಪಕ ಚರ್ಚೆ ಮತ್ತು ವಿಶ್ಲೇಷಣೆಯ ನಂತರ ಒಕ್ಕೂಟವನ್ನು ಇಂಡಿಯಾ, ಅಂದರೆ ಭಾರತ ವ್ಯಾಖ್ಯಾನಿಸಿದೆ. ಇದನ್ನು ಏಕಪಕ್ಷೀಯವಾಗಿ ಬದಲಾಯಿಸುವ ಅಧಿಕಾರ ಯಾವ ಸಂಸ್ಥೆಗಳಿಗೂ ಇಲ್ಲ. ಸಂವಿಧಾನ ತಿದ್ದುಪಡಿಯಾಗದೆ, ಈ ಬಗೆಯ ಸಲಹೆ-ಶಿಫಾರಸ್ಸುಗಳು ಸಂವಿಧಾನ ವಿರೋಧಿ ನಡೆಯಾಗುತ್ತವೆ ಎಂದಿದ್ದಾರೆ.
ಇದಕ್ಕೆ ಕಾರಣರಾದ ಸಮಿತಿಯ ಅಧ್ಯಕ್ಷ ಸಿ.ಐ.ಇಸಾಕ್ ಮತ್ತು ಸದಸ್ಯರನ್ನು ವಜಾಗೊಳಿಸಿ ಸಮಿತಿಯನ್ನು ವಿಸರ್ಜಿಸಬೇಕು. ಈ ಸಮಿತಿಯ ಎಲ್ಲ ಪ್ರಸ್ತಾವನೆಗಳನ್ನು ಕೈಬಿಡಬೇಕು ಎಂದು ನಿರಂಜನಾರಾಧ್ಯ.ವಿ.ಪಿ. ತಿಳಿಸಿದ್ದಾರೆ.