ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ಸೂಚನೆ
ಚಿಕ್ಕಮಗಳೂರು, ನ.8: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕಾಡಾನೆಗಳ ಹಾವಳಿ ತಪ್ಪಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬುಧವಾರ ಮೂಡಿಗೆರೆ ಪಟ್ಟಣದ ಪ್ಲಾಂಟರ್ಸ್ ಕ್ಲಬ್‍ನಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಶಾಸಕರು ಹಾಗೂ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಂಧಲೆ ಹೆಚ್ಚಾಗಿದ್ದು, ಕಾಡಾನೆಗಳನ್ನು ಕಾಡಿಗೆ ಅಟ್ಟಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಆಲ್ದೂರು ಸಮೀಪ ಕಾಡಾನೆ ದಾಳಿಯಿಂದ ಮೃತರಾದ ಮೀನಾ ಅವರ ಮೃತದೇಹ ಇಟ್ಟುಕೊಂಡು ಹೋರಾಟ ನಡೆಸುತ್ತಿದ್ದ ಪ್ರತಿಭಟನಕಾರರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಆ ಕುಟುಂಬಕ್ಕೆ 15ಲಕ್ಷ ರೂ. ಪರಿಹಾರ ನೀಡಲಾಗುವುದು. ಅರಣ್ಯ ಸಚಿವರು ಶೀಘ್ರ ಜಿಲ್ಲೆಗೆ ಬಂದು ಸುದೀರ್ಘ ಸಭೆ ನಡೆಸಿ ರಕ್ಷಣಾ ಕಾರ್ಯಗಳ ಕುರಿತು ಕ್ರಮಕೊಳ್ಳುತ್ತಾರೆ ಎಂದ ಅವರು, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಕಾಫಿತೋಟಗಳು ಇರುವುದರಿಂದ ಕಾಡಾನೆಗಳು ಬರುತ್ತಿವೆ. ರೈಲ್ವೆ ಬ್ಯಾರಿಕೇಡ್ ಹಾಕುವುದೂ ಸೇರಿದಂತೆ ಅಗತ್ಯ ಕ್ರಮಗಳ ಕುರಿತು ಕಾರ್ಯಪಡೆಗೆ ಸ್ಪಷ್ಟ ಸೂಚನೆ ನೀಡಲು ಅರಣ್ಯ ಸಚಿವರ ಜೊತೆ ಚರ್ಚಿಸಿದ್ದೇನೆ ಎಂದರು.
ಕಾಡಾನೆಗಳಿಗೆ ಗುಂಡು ಹೊಡೆದು ಕೊಲ್ಲಬೇಕು ಎನ್ನುವ ಸ್ಥಳೀಯರ ಮತ್ತು ಪ್ರತಿಭಟನಕಾರರ ಒತ್ತಾಯದ ಕುರಿತಂತೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ಹಂತಕ್ಕೆ ಯೋಚನೆ ಮಾಡುವುದು ಬೇಡ. ಕಾಡಾನೆ ಹಾವಳಿ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ರೈತರ ಪಂಪ್‍ಸೆಟ್‍ಗಳಿಗೆ 7ಗಂಟೆಗಳ ವಿದ್ಯುತ್ ಪೂರೈಕೆಗೆ ಇಂಧನ ಇಲಾಖೆ, ಮೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು. ತಾಲೂಕು ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಉಳಿಯಬೇಕು. ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸಮಸ್ಯೆ ಆಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ನಯನಾ ಮೋಟಮ್ಮ, ಎಚ್.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ, ಕೆ.ಎಸ್.ಆನಂದ್, ಜಿ.ಎಚ್.ಶ್ರೀನಿವಾಸ್ ಉಪಸ್ಥಿತರಿದ್ದರು.