ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ತರಬೇತಿ ಉಚಿತ : ಸಚಿವ ಮಧು ಬಂಗಾರಪ್ಪ

Update: 2024-07-31 15:28 GMT

ಬೆಂಗಳೂರು: ಸರಕಾರಿ ಶಾಲಾ ಮಕ್ಕಳಿಗೆ ಪ್ರತಿ ವಾರ್ಷಿಕ ಸಾಲಿನಲ್ಲಿ ನೀಟ್, ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ 25 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಉಚಿತ ತರಬೇತಿ ನೀಡಲಾಗುವುದು.ಇದರಿಂದ ಸರಕಾರಿ ಶಾಲೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುವುದಕ್ಕೆ ಲಕ್ಷಾಂತರ ರೂ.ಶುಲ್ಕ ಪಾವತಿಸುವುದನ್ನು ತಡೆಗಟ್ಟಬಹುದು ಎಂದು ನುಡಿದರು.

ಇನ್ಣೂ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಗೂ ಇಲಾಖೆಯಿಂದ ನೀಡಲಾಗುವ ಪ್ರತ್ಯೇಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ 25 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿಗೆ ಆಯ್ಕೆ ಮಾಡುವ ಜತೆಗೆ, ತರಬೇತಿಯ ತರಗತಿಗಳು ಆನ್‍ಲೈನ್ ಮೂಲಕ ನಡೆಯಲಿದ್ದು, ಅವರೊಂದಿಗೆ ಇತರ ವಿದ್ಯಾರ್ಥಿಗಳೂ ಅದರ ಲಾಭ ಪಡೆಯಬಹುದು. ಅಲ್ಲದೆ, ಈ ಯೋಜನೆಗಾಗಿ ಇಲಾಖೆಯು 12.50 ಕೋಟಿ ರೂ. ಖರ್ಚು ಮಾಡಲಿದೆ ಎಂದು ಅವರು ಮಾಹಿತಿ ನೀಡಿದರು.

ಎಸ್‍ಡಿಎಂಸಿಗಳಿಗೆ ಮೊಟ್ಟೆ ನೀಡುವ ಹೊಣೆ : ರಾಜ್ಯದ ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಆರು ದಿನಗಳ ಕಾಲ ಉಚಿತವಾಗಿ ಮೊಟ್ಟೆ ನೀಡುವ ಕಾರ್ಯಕ್ರಮ ಅಝೀಂ ಪ್ರೇಮ್‍ಜಿ ಫೌಂಡೇಷನ್ ಸಹಯೋಗದಲ್ಲಿ ಆರಂಭಿಸಲಾಗಿದೆ. ಈವರೆಗೆ ಸರಕಾರದಿಂದ 2 ದಿನ ಮಾತ್ರ ಮೊಟ್ಟೆ ನೀಡಲಾಗುತ್ತಿತ್ತು. ಇದೀಗ ಅದನ್ನು 6 ದಿನಕ್ಕೆ ವಿಸ್ತರಿಸಲಾಗಿದೆ. ಅಲ್ಲದೆ, ಇಲಾಖೆಯಿಂದ ಮೊಟ್ಟೆ ನೀಡುವುದರಿಂದ ಗುಣಮಟ್ಟದ ಬಗ್ಗೆ ಪ್ರಶ್ನೆ ಉದ್ಭವವಾಗಲಿದೆ. ಹೀಗಾಗಿ ಆಯಾ ಶಾಲೆಯ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ (ಎಸ್‍ಡಿಎಂಸಿ)ಗಳಿಗೆ ಮೊಟ್ಟೆ ನೀಡುವ ಹೊಣೆಯನ್ನು ನೀಡಲಾಗುತ್ತಿದೆ. ಆ ಎಸ್‍ಡಿಎಂಸಿಗಳಿಗೆ ಮೊಟ್ಟೆ ಖರೀದಿಗೆ ತಗಲುವ ಹಣವನ್ನು ಇಲಾಖೆಯಿಂದ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಪುಸ್ತಕ ಹೊರೆ ತಗ್ಗಿಸುತ್ತೇವೆ: ‘ಮಕ್ಕಳ ಶಾಲಾ ಬ್ಯಾಗ್‍ನ ಹೊರೆ ಕಡಿಮೆ ಮಾಡಲು ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತಿ ತಿಂಗಳ 3ನೆ ಶನಿವಾರ ಬ್ಯಾಗ್ ರಹಿತ ದಿನವನ್ನಾಗಿ ಮಾಡಲಾಗುತ್ತಿದೆ. ಅದರ ಜತೆಗೆ ನೋಟ್ ಬುಕ್‍ಗಳ ಪ್ರಮಾಣ ಕಡಿಮೆ ಮಾಡಲು ಬಹು ವಿಷಯಗಳಿಗೆ ಒಂದೇ ನೋಟ್ ಪುಸ್ತಕ ಅಥವಾ ನೋಟ್ ಶೀಟ್ ಪರಿಚಯಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಇದೆ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News