ಮಾದಕ ದ್ರವ್ಯಗಳ ನಿರ್ಲಕ್ಷ್ಯ ಅಪಾಯಕ್ಕೆ ಆಹ್ವಾನ
ಮಂಗಳೂರು: ಆತ ಅಂತಿಮ ವರ್ಷದ ಪದವಿ ಕಾಲೇಜು ವಿದ್ಯಾರ್ಥಿ. ಅದಾಗಲೇ ಕಾಲೇಜು ಬೀಳ್ಕೊಡುಗೆ ಕಾರ್ಯಕ್ರಮ ಮುಗಿದಾಗಿತ್ತು. ಆ ದಿನ ಆತ ತನ್ನ ಸ್ನೇಹಿತರ ಜತೆ ಸ್ನೇಹಕೂಟಕ್ಕೆಂದು ಮನೆಯವರಿಗೆ ಹೇಳಿ ಹೋಗುವಾಗ ಮನೆಯಲ್ಲಿ ಉಳಿದಿದ್ದ ‘ಬಾಂಗ್’ ಒಂದನ್ನು ತನ್ನ ಜತೆ ಒಯ್ದಿದ್ದ. ದಾರಿಯಲ್ಲಿ ಅದನ್ನು ಚಾಕಲೇಟ್ ಜತೆ ತಿಂದು ಸ್ನೇಹಿತರ ಜತೆ ಎಂಜಾಯ್‌ಗಾಗಿ ತೆರಳಿದ್ದ. ಆ ದಿನ ರಾತ್ರಿ ಆತ ಹಾಗೂ ಆತನ ಸ್ನೇಹಿತರು ರೂಂ ಮಾಡಿಕೊಂಡು ರಾತ್ರಿ ಕಳೆಯಲು ನಿರ್ಧರಿಸುತ್ತಾರೆ. ತಡರಾತ್ರಿ ಅಂಗಡಿ ಹುಡುಕುತ್ತಾ ಈ ಯುವಕ ರೂಂನಿಂದ ಹೊರಬಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾನೆ. ಯುವಕನನ್ನು ಠಾಣೆಗೆ ಕರೆದೊಯ್ದು ಅನುಮಾನದ ಮೇರೆಗೆ ಆತನನ್ನು ಮಾದಕ ದ್ರವ್ಯ ಸೇವನೆಯ ತಪಾಸಣೆಗೊಳಪಡಿಸುತ್ತಾರೆ. ತಪಾಸಣೆಯ ವರದಿಯಲ್ಲಿ ‘ಪಾಸಿಟಿವ್’ ಬಂದ ಕಾರಣ ಯುವಕನ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ಕೌನ್ಸೆಲಿಂಗ್‌ಗೆ ಕಳುಹಿಸುತ್ತಾರೆ. ತನ್ನ ಮನೆಯವರಿಗೆ ವಿಷಯ ತಿಳಿಸಬೇಡಿ ಎಂದು ಯುವಕ ದಂಬಾಲು ಬೀಳುತ್ತಾನೆ. ಇತ್ತ ಮನೆಯವರಿಗೆ ವಿಷಯ ತಿಳಿದು ಕಂಗಾಲಾಗುತ್ತಾರೆ.
ಇದು ಮೂರು ವಾರದ ಹಿಂದೆ ಮಂಗಳೂರಿನಲ್ಲಿ ನಡೆದ ಘಟನೆ. ಆ ಯುವಕ ಅಂದು ಮನೋರಂಜನೆಗಾಗಿ ಚಾಕಲೇಟ್ ಜತೆ ತಿಂದ ಬಾಂಗ್ ತಪಾಸಣೆಯ ಸಂದರ್ಭ ಡ್ರಗ್ ಸೇವಿಸಿರುವುದಕ್ಕೆ ಸಾಕ್ಷಿಯಾಯಿತು. ಈ ಘಟನೆಯನ್ನು ಉಲ್ಲೇಖಿಸಲು ಮುಖ್ಯ ಕಾರಣ ಇತ್ತೀಚೆಗೆ ನಗರದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಬಾಂಗ್ ಚಾಕಲೇಟ್. ನಗರದ ರಥಬೀದಿ ಮತ್ತು ಹೈಲ್ಯಾಂಡ್ ಸಮೀಪದ ಅಂಗಡಿಗಳಿಂದ ವಶಪಡಿಸಿಕೊಳ್ಳಲಾದ ೧೧೦ ಕೆಜಿ ಚಾಕಲೇಟ್‌ನಲ್ಲಿ ಮಾದಕ ದ್ರವ್ಯ ಮಿಶ್ರಣದ ಅನುಮಾನದ ಹಿನ್ನೆಲೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿತ್ತು. ಟೆಸ್ಟ್ ವರದಿಯಲ್ಲಿ ಆ ಚಾಕಲೇಟ್‌ಗಳು ಗಾಂಜಾ ಮಿಶ್ರಿತ ಎನ್ನುವುದು ಪತ್ತೆಯಾಗಿದೆ.
ಶಾಲಾ ಕಾಲೇಜು ಮಕ್ಕಳಿಂದಲೇ ದೊರೆತ ಮಾಹಿತಿಯನ್ನು ಆಧರಿಸಿ ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಚಾಕಲೇಟ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ಪೊಲೀಸರು ಒಂದಿಷ್ಟು ನಿರ್ಲಕ್ಷ್ಯ ವಹಿಸಿದ್ದರೂ, ಈ ಚಾಕಲೇಟ್ ಅದೆಷ್ಟು ಮಂದಿಗೆ ಮಾರಾಟವಾಗಿ ಅದ್ಯಾವ ರೀತಿಯ ಅನಾಹುತಗಳಿಗೆ ಕಾರಣವಾಗುತ್ತಿತ್ತೋ?
ಗ್ರಾಮೀಣ ಭಾಗದಲ್ಲೂ ಬಿಗಿ ಕಾರ್ಯಾಚರಣೆ
2023 ರ ಜನವರಿಯಿಂದ ಈವರೆಗೆ ಎನ್‌ಡಿಪಿಎಸ್ ಕಾಯ್ದೆಯ ಮಾರಾಟ ಮತ್ತು ಪೂರೈಕೆಯಡಿ ೧೨ ಪ್ರಕರಣಗಳು ದಾಖಲಾಗಿದ್ದು, ೧೪ ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ ೯.೨೩೬ ಕೆಜಿ ಗಾಂಜಾ ಮತ್ತು 71.46 ಗ್ರಾಂ ಎಂಡಿಎಂಎ ಸೇರಿ ಒಟ್ಟು 5.58ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಮಾದಕ ದ್ರವ್ಯ ಸೇವನೆಯಡಿ ದಾಖಲಾದ ೩೩ ಪ್ರಕರಣಗಳಲ್ಲಿ39 ಮಂದಿಯನ್ನು ಬಂಧಿಸಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಹಿಂದೆಲ್ಲಾ ಇಂತಹ ಚಾಕಲೇಟ್‌ಗಳನ್ನು ಔಷಧಿಯ ಹೆಸರಿನಲ್ಲೂ ಕಾನೂನುಬದ್ಧವಾಗಿ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾತುಗಳೂ ಇವೆ. ಗಾಂಜಾದಿಂದಲೇ ಇದು ತಯಾರಾಗುವುದರಿಂದ ಇದು ಸೇವಿಸುವವರನ್ನು ಮತ್ತೆ ಮತ್ತೆ ಆಕರ್ಷಿಸುತ್ತದೆ. ಇತರ ಆಹಾರ ಪದಾರ್ಥಗಳ ಜತೆಗೆ ಇದನ್ನು ಬೆರೆಸಿ ನೀಡುವ ಮೂಲಕ ಮಾದಕ ದ್ರವ್ಯ ವ್ಯಸನದತ್ತ ಅಮಾಯಕರನ್ನು ಆಕರ್ಷಿಸುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ವ್ಯಸನಕ್ಕೆ ಕಾರಣವಾಗುವ ಇಂತಹ ಡ್ರಗ್ಸ್ ಮಾಯಾಲೋಕದ ಈ ‘ಗೇಟ್ ವೇ’ಗಳು ಜಾಲಿ, ಖುಷಿ, ದುಃಖ ಮರೆಸುವ ಸಾಧನದ ನೆಪದಲ್ಲಿ ಬಳಕೆಯಾಗಿ ಕೊನೆಗೆ ಸೇವಿಸುವಾತನ ಜತೆಗೆ ಆತನ ಕುಟುಂಬವನ್ನೇ ಬೀದಿಗೆ ತಳ್ಳುತ್ತದೆ.
ವ್ಯಸನದ ಅಪಾಯ ವ್ಯಸನಿಗೇ ಅರಿವಿರದು!: ನಗರದ ಚಿಕಿತ್ಸಾ ಕೇಂದ್ರವೊಂದರಲ್ಲಿ ಇತ್ತೀಚೆಗೆ ೧೯ ವರ್ಷದ ಯುವಕನೊಬ್ಬನನ್ನು ದಾಖಲಿಸಲಾಗಿತ್ತು. ಆತ ಗಾಂಜಾ ಮತ್ತು ನಿದ್ದೆ ಮಾತ್ರೆಯ ವ್ಯಸನಕ್ಕೆ ತುತ್ತಾಗಿದ್ದ. ನಿದ್ದೆ ಮಾಡಲಾಗದೆ ಚಡಪಡಿಸುವಿಕೆ, ನಿದ್ದೆ ಮಾತ್ರೆಗಾಗಿ ಅಂಗಲಾಚುವಿಕೆಗಾಗಿ ಆತನನ್ನು ಚಿಕಿತ್ಸೆಗಾಗಿ ಪ್ರತ್ಯೇಕ ಕೊಠಡಿಯೊಂದರಲ್ಲಿ ಇರಿಸಲಾಗಿತ್ತು. ಆದರೆ ಆತ ಚಿಕಿತ್ಸಾ ಕೇಂದ್ರದ ಗೇಟು, ಬೀಗವನ್ನು ಕೈಯಿಂದಲೇ ಮುರಿದು ಓಡಿಹೋಗುವ ಪ್ರಯತ್ನದಲ್ಲಿ ಕೇಂದ್ರದ ಚಿಕಿತ್ಸಕರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ಕೊನೆಗೆ ಪೋಷಕರ ಮೂಲಕ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.
ತಾನೇನು ಮಾಡುತ್ತಿದ್ದೇನೆಂಬ ಅರಿವೇ ಈ ವ್ಯಸನಿಗಳಿಗಿರುವುದಿಲ್ಲ...
ಮೂರ್ನಾಲ್ಕು ವರ್ಷಗಳ ಹಿಂದೆ ಡ್ರಗ್ ವ್ಯಸನಿಯಾಗಿದ್ದಯುವಕನೊಬ್ಬನ ಬಗ್ಗೆ ನೆರೆಹೊರೆಯವರು ಆತನ ತಂದೆಗೆ ಮಾಹಿತಿ ನೀಡಿ, ಆತನಿಗೆ ಚಿಕಿತ್ಸೆ ಕೊಡಿಸುವ ಬಗ್ಗೆ ತಿಳಿ ಹೇಳಿದ್ದರು. ಆತನ ಪೋಷಕರು ಮಾತ್ರ ನೆರೆಹೊರೆಯವರ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕೊನೆಗೆ ಆ ಯುವಕ ತನ್ನ ತಂಗಿಯನ್ನೇ ಕೊಲೆಗೈದ. ಬಳಿಕ ಆತನಿಗೆ ಜಾಮೀನು ದೊರಕಿ ಚಿಕಿತ್ಸೆಗೆ ಸುಮಾರು ಮೂರು ತಿಂಗಳು ಬೇಕಾಯಿತು ಎನ್ನುತ್ತಾರೆ ನಗರದ ವ್ಯಸನಮುಕ್ತ ಕೇಂದ್ರವೊಂದರ ಮೇಲ್ವಿಚಾರಕರು.
ದ.ಕ. ಜಿಲ್ಲೆಯಲ್ಲಿ ಆಸ್ಪತ್ರೆಗಳನ್ನು ಹೊರತುಪಡಿಸಿ ಸ್ವಯಂ ಸೇವಾ ಸಂಸ್ಥೆಗಳಾಗಿ ಅಂದಾಜು 10ರಷ್ಟು ಡಿ ಎಡಿಕ್ಷನ್ ಸೆಂಟರ್ಗಳು ಕಾರ್ಯಾಚರಿಸುತ್ತಿವೆ. ವರ್ಷಕ್ಕೆ ಇಂತಹ ಕೇಂದ್ರವೊಂದರಲ್ಲಿ ಅಂದಾಜು ೫೦೦ರಷ್ಟು ಮಂದಿ ವಿವಿಧ ರೀತಿಯ ಮಾದಕ ದ್ರವ್ಯ ವ್ಯಸನಕ್ಕೆ ಸಂಬಂಧಿಸಿ ಕೌನ್ಸೆಲಿಂಗ್ ಹಾಗೂ ಚಿಕಿತ್ಸೆಗೊಳಪಡುತ್ತಿದ್ದಾರೆ. ಇದರಲ್ಲಿ ಸುಮಾರು 100ರಿಂದ 150ರಷ್ಟು ಮಂದಿ ಡ್ರಗ್ ವ್ಯಸನಿಗಳಾಗಿದ್ದು, ಶೇ.20 ರಷ್ಟು ಡ್ರಗ್ ವ್ಯಸನಿಗಳು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಚಿಕಿತ್ಸೆಗೆ ದಾಖಲಾದವರಿರುತ್ತಾರೆ. ಜಿಲ್ಲೆಯಲ್ಲಿ ಡ್ರಗ್ ವ್ಯಸನಿಗಳ ಚಿಕಿತ್ಸೆ ಅಥವಾ ಕೌನ್ಸೆಲಿಂಗ್ ಗಾಗಿ ಪ್ರತ್ಯೇಕ ಕೇಂದ್ರ ಎಂಬುದಿಲ್ಲ.
ಪೋಷಕರಿಗೆ ತಮ್ಮ ಮಕ್ಕಳ ಮೇಲೆ ವಿಶ್ವಾಸ ಸಹಜ. ಅದು ಅಗತ್ಯ ಕೂಡಾ. ಅದರ ಜತೆಯಲ್ಲೇ ಮಕ್ಕಳ ಹಾವಭಾವ, ಚಲನವಲನದ ಮೇಲೆ ಗಮನವಿರಿಸಿ, ಮಕ್ಕಳಿಗೆ ಸಮಯ ಕೊಡುವುದು ಮಾತ್ರವಲ್ಲ, ಅವರ ಜತೆ ಸ್ನೇಹದಿಂದ ವರ್ತಿಸುವುದು ಅತೀ ಅಗತ್ಯ. ಮಕ್ಕಳು ದೊಡ್ಡವರಾಗಿದ್ದಾರೆಂಬ ನಿರ್ಲಕ್ಷ್ಯ ಬೇಡ. ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಮಾತುಗಳಿಗೆ ಕಿವಿಯಾಗಿ, ಅವರ ಸಮಸ್ಯೆಗಳನ್ನು ಅರಿತುಕೊಂಡರೆ, ಮಕ್ಕಳು ವ್ಯಸನಕ್ಕೆ ಬಲಿಯಾಗುವ, ತಪ್ಪು ದಾರಿ ಹಿಡಿಯುವುದರಿಂದ ಅವರನ್ನು ಆರಂಭದಲ್ಲಿಯೇ ನಿಯಂತ್ರಿಸಲು ಸಾಧ್ಯ.
- ಲಿಡಿಯಾ ಲೋಬೊ, ಸಮಾಲೋಚಕರು, ಲಿಂಕ್ ಡಿಎಡಿಕ್ಷನ್ ಸೆಂಟರ್, ಮಂಗಳೂರು