ನ.30ರಂದು ಆರೋಗ್ಯ ಸೇವೆಗೆ ಹೊಸ 262 ಆಂಬ್ಯುಲೆನ್ಸ್ ಸೇರ್ಪಡೆ: ಸಚಿವ‌ ದಿನೇಶ್ ಗುಂಡೂರಾವ್

Update: 2023-11-29 16:28 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ಸೇವೆಯನ್ನು ಮತ್ತಷ್ಟು ಬಲಪಡಿಸಲು ಹೊಸದಾಗಿ 262 ಆಂಬ್ಯುಲೆನ್ಸ್ ಗಳನ್ನು ಸೇರ್ಪಡೆ ಮಾಡಲಾಗುತ್ತಿದ್ದು, ನ.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪೈಕಿ 157 ಬೇಸಿಕ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ ಗಳು ಹಾಗೂ 105 ಸುಧಾರಿತ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ ಗಳಿವೆ. ಸುಧಾರಿತ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್‍ಗಳು ಟ್ರಾನ್ಸ್‍ಫೋರ್ಟ್ ವೆಂಟಿಲೇಟರ್ ಮತ್ತು ಡಿಫಿಬ್ರಿಲೇಟರ್ ಹೊಂದಿವೆ ಎಂದರು.

ಹೃದಯ ಮತ್ತು ಉಸಿರಾಟದ ತುರ್ತು ಪರಿಸ್ಥಿತಿಗಳಲ್ಲಿ ಇವು ಸಹಕಾರಿ. ಪ್ರತಿ ಆಂಬ್ಯುಲೆನ್ಸ್ ನಲ್ಲಿ ತುರ್ತು ಸೇವೆಗಳನ್ನು ನಿರ್ವಹಿಸಲು ತರಬೇತಿ ಪಡೆದ ಒಬ್ಬ ತುರ್ತು ವೈದ್ಯಕೀಯ ತಂತ್ರಜ್ಞ ಮತ್ತು ಒಬ್ಬ ಚಾಲಕ ದಿನಕ್ಕೆ ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. 262 ಅಂಬ್ಯುಲೆನ್ಸ್ ಗಳ ಸೇರ್ಪಡೆಯೊಂದಿಗೆ ಒಟ್ಟು 715 ಆಂಬ್ಯುಲೆನ್ಸ್ ಗಳು 108 ಆರೋಗ್ಯ ಕವಚ ಸೇವೆಯಲ್ಲಿ ಕಾರ್ಯನಿರ್ವಹಿಸುವಂತಾಗಲಿವೆ ಎಂದು ಅವರು ಹೇಳಿದರು.

ಮುಂಬರುವ ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಆಂಬ್ಯುಲೆನ್ಸ್ ಗಳನ್ನು ಹೆಚ್ಚಿಸಲಾಗುವುದು. 108 ಆಂಬ್ಯುಲೆನ್ಸ್ ಸೇವೆಗಳಿಗೆ ಹೊಸ ಸೇವಾದಾರರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ. ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿರುವ ವಿವಿಧ ಮಾದರಿಗಳ ಅಧ್ಯಯನಕ್ಕೆ ಹಿರಿಯ ಆರೋಗ್ಯ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ತಾಂತ್ರಿಕ ಸಮಿತಿಯ ಸಲಹೆ ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದ ತಂಡಗಳು ಸಲ್ಲಿಸಿದ ವರದಿಯನ್ನು ಆಧರಿಸಿ, ಸಾರ್ವಜನಿಕರಿಗೆ ಅಂತರ್ ರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತುರ್ತು ಆರೋಗ್ಯ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಲು ಕ್ರಮವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳ ಅಳವಡಿಕೆ: ಆರು ತಿಂಗಳ ಹಿಂದೆ 173 ಇದ್ದ ಡಯಾಲಿಸಿಸ್ ಕೇಂದ್ರಗಳ ಸಂಖ್ಯೆ 219ಕ್ಕೆ ಏರಿಕೆಯಾಗಿದೆ. 46 ತಾಲೂಕುಗಳಲ್ಲಿ ಹೊಸ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ರಾಜ್ಯಾದ್ಯಂತ ಏಕ ಬಳಕೆಯ 800 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೆ ನಾಲ್ಕು ವಿಭಾಗವಾರು ಟೆಂಡರ್ ಪ್ರಕ್ರಿಯೆಯನ್ನ ಬಹುತೇಕ ಪೂರ್ಣಗೊಳಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಬೆಂಗಳೂರು ವಿಭಾಗದಲ್ಲಿ 250, ಮೈಸೂರು ವಿಭಾಗದಲ್ಲಿ 225, ಬೆಳಗಾವಿ ವಿಭಾಗದಲ್ಲಿ 201 ಹಾಗೂ ಕಲಬುರಗಿ ವಿಭಾಗದಲ್ಲಿ 125 ಯಂತ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಳವಡಿಸಲಾಗುತ್ತಿದೆ. ಡಿಸೆಂಬರ್ ಅಂತ್ಯ ಅಥವಾ ಜನವರಿ ತಿಂಗಳಲ್ಲಿ ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳ ಸೇವೆ ಲಭ್ಯವಾಗಲಿದೆ ಎಂದು ಅವರು ಹೇಳಿದರು.

2025 ರೊಳಗೆ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ನಿರ್ಮಾಣದ ಗುರಿಯಿದೆ. ಈ ಯೋಜನೆಗೆ ಸರಕಾರ 185.74 ಕೋಟಿ ರೂ.ಅನುದಾನ ನೀಡಲು ಅನುಮೋದನೆ ನೀಡಿದೆ. ಶಾಲಾ, ಕಾಲೇಜು ಮಕ್ಕಳ ರಕ್ತ ಹೀನತೆ ತಪಾಸಣೆ ಹಾಗೂ ಉಚಿತ ಔಷಧಿ ಒದಗಿಸಲಾಗುವುದು. 40.50 ಕೋಟಿ ರೂ.ವೆಚ್ಚದಲ್ಲಿ ಶುಚಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಗಳನ್ನು ಒದಗಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News