ಇನ್ಮುಂದೆ ದಾಖಲಾಗುವ ಕೇಸ್​ಗಳಿಗೆ ಹೊಸ ಅಪರಾಧ ಕಾನೂನುಗಳು ಅನ್ವಯ: ಗೃಹ ಸಚಿವ ಪರಮೇಶ್ವರ್

Update: 2024-07-01 07:11 GMT

ಬೆಂಗಳೂರು: ದೇಶಾದ್ಯಂತ ಇಂದಿನಿಂದ ಮೂರು ಹೊಸ ಅಪರಾಧ ಕಾನೂನುಗಳು ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಗೃಹಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ʼಕಾನೂನುಗಳ ಜಾರಿಗೆ ನಾವು ಒಂದು ಆ್ಯಪ್ ಅಭಿವೃದ್ಧಿಪಡಿಸಿದ್ದೇವೆ. ಅಲ್ಲದೆ, ಇನ್ನು ಮುಂದೆ ದಾಖಲಾಗುವ ಕೇಸ್‌ಗಳಿಗೆ ಈ ಕಾನೂನುಗಳು ಅನ್ವಯ ಆಗಲಿದೆʼ ಎಂದು ಹೇಳಿದರು.

ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಹೊಸ ಅಪರಾಧ ಕಾನೂನುಗಳ ಪರಿಣಾಮ ಏನು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಸ್ವಲ್ಪ ದಿನಗಳ ಬಳಿಕ ಇದರ ಯಶಸ್ಸಿನ ಕುರಿತು ಗೊತ್ತಾಗಲಿದೆ' ಎಂದು ಹೇಳಿದರು.

ಇವತ್ತಿನಿಂದ ದಾಖಲಾಗುವ ಎಲ್ಲ ಪ್ರಕರಣಗಳು ಹೊಸ ಕಾನೂನುಗಳಡಿ ಬರುತ್ತವೆ. ಹೊಸ ಕಾನೂನುಗಳ ಜಾರಿ ಬಗ್ಗೆ ಕಾನ್ಸ್‌ಟೇಬಲ್​ನಿಂದ ಹಿಡಿದು ಎಲ್ಲರಿಗೂ ತರಬೇತಿ ನೀಡಿದ್ದೇವೆ. ಇದಕ್ಕಾಗಿ ಪೊಲೀಸರಿಗೆ ಸಹ ಆ್ಯಪ್ ಸಿದ್ಧಪಡಿಸಲಾಗಿದೆ. ಇಡೀ ದೇಶದಲ್ಲಿ ಮೂರು ಕಾನೂನುಗಳು ಜಾರಿಯಾಗಿವೆ. ಫೀಡ್ ಬ್ಯಾಕ್ ನೋಡಿಕೊಂಡು ಪರಿಷ್ಕರಣೆ ಮಾಡಬಹುದು ಎಂದರು.

ಸರಕಾರದ ಭವಿಷ್ಯದ ಬಗ್ಗೆ ಸಿ .ಟಿ.ರವಿ ಮತ್ತು ಬಸವರಾಜ ಬೊಮ್ಮಾಯಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, 'ಅದು ವ್ಯಾಖ್ಯಾನಗಳು. ಅವರವರಲ್ಲೇ ಹೇಳಿಕೆಗಳು ವಿಭಿನ್ನವಾಗಿವೆ. ಬೊಮ್ಮಾಯಿ ಒಂದು ಹೇಳಿಕೆ ಕೊಟ್ಟರೆ, ಸಿ ಟಿ. ರವಿ ಇನ್ನೊಂದು ಹೇಳಿಕೆ ಕೊಡುತ್ತಾರೆ. ಅವರಲ್ಲೇ ಹೊಂದಾಣಿಕೆ ಇಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News