ಕಡಿಮೆ ದರದಲ್ಲಿ ಗ್ರಾಹಕರಿಗೆ ವಿದ್ಯುತ್ ನೀಡಲು ಹೊಸ ಇಂಧನ ನೀತಿ ಜಾರಿಗೆ ಚಿಂತನೆ: ಸಚಿವ ಕೆ.ಜೆ.ಜಾರ್ಜ್

Update: 2023-08-01 13:47 GMT

ಬೆಂಗಳೂರು, ಆ.1:ವಿದ್ಯುತ್ ಉತ್ಪಾದನಾ ದರವನ್ನು ತಗ್ಗಿಸುವ ಜೊತೆಗೆ, ಕಡಿಮೆ ದರದಲ್ಲಿ ಗ್ರಾಹಕರಿಗೆ ವಿದ್ಯುತ್ ನೀಡಲು ಹೊಸ ನೀತಿಯೊಂದನ್ನು ಜಾರಿ ಮಾಡುವ ಚಿಂತನೆ ಇದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಮಂಗಳವಾರ ಅರಮನೆ ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಂಪ್ರಾದಾಯಿಕವಲ್ಲದ ಮೂಲಗಳಿಂದ ಇಂಧನ ಉತ್ಪಾದಿಸಿ ಕಡಿಮೆ ದರದಲ್ಲಿ ಜನರಿಗೆ ವಿದ್ಯುತ್ ಕೊಡುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ. ಹಾಗಾಗಿ ಸೋಲಾರ್, ವಿಂಡ್ ಮತ್ತು ಗ್ರೀನ್ ಹೈಡ್ರೋಜನ್ ಇಂಧನ ಉತ್ಪಾದನೆಗೆ ಒತ್ತು ಕೊಡುವ ಹೊಸ ನೀತಿಯೊಂದನ್ನು ಜಾರಿ ಮಾಡಲು ಚಿಂತನೆ ನಡೆದಿದೆ ಎಂದು ಹೇಳಿದರು.

ಸಾಂಪ್ರದಾಯಿಕವಲ್ಲದ ಇಂಧನ ಉತ್ಪಾದಿಸಿದರೆ ಉತ್ಪಾದನಾ ದರ ಕಡಿಮೆಯಾಗುತ್ತದೆ. ಆಗ ಗ್ರಾಹಕರಿಗೂ ಕಡಿಮೆ ದರದಲ್ಲಿ ವಿದ್ಯುತ್ ಒದಗಿಸಬಹುದು. ಹಾಗಾಗಿ ಸೋಲಾರ್, ವಿಂಡ್ ಮತ್ತು ಗ್ರೀನ್ ಹೈಡ್ರೋ ಇಂಧನ ಉತ್ಪಾದನೆಗೆ ಒತ್ತು ನೀಡಲು ಹೊಸ ನೀತಿಯೊಂದನ್ನು ಜಾರಿ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ ಎಂದ ಅವರು, ಅದರಲ್ಲೂ ಸೋಲಾರ್‍ನಿಂದ ಇಂಧನ ಉತ್ಪಾದಿಸಲು ರೈತರಿಂದ ಭೂಮಿ ಗುತ್ತಿಗೆ ಪಡೆಯುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು.

ಇನ್ನೂ, ವಿದ್ಯುತ್ ಸಬ್‍ಸ್ಟೇಷನ್ ಅಕ್ಕಪಕ್ಕದಲ್ಲಿರುವ ಜಮೀನುಗಳನ್ನು ಗುತ್ತಿಗೆ ಪಡೆದು ಅಲ್ಲಿ ಸೋಲಾರ್‍ನಿಂದ ವಿದ್ಯುತ್ ಉತ್ಪಾದಿಸಿ ಆ ಸಬ್‍ಸ್ಟೇಷನ್ ಮೂಲಕ ಸರಬರಾಜು ಮಾಡಲು ಸಾಧ್ಯವಿದೆ. ಹಾಗೆಯೇ ಗಾಳಿ ಮೂಲಕವೂ ವಿದ್ಯುತ್ ಉತ್ಪಾದನೆ ಮಾಡಿದರೆ ಕಡಿಮೆ ದರದಲ್ಲಿ ಜನರಿಗೆ ವಿದ್ಯುತ್ ತಲುಪಿಸಬಹುದು. ಈ ಬಗ್ಗೆ ಚರ್ಚೆಗಳು ನಡೆದಿದ್ದು, ಸದ್ಯದಲ್ಲೇ ಹೊಸ ನೀತಿಯನ್ನು ರೂಪಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News