ಹೊಸ ವರ್ಷಾಚರಣೆ ಹಿನ್ನೆಲೆ; ಬೆಂಗಳೂರಿನಲ್ಲಿ ಸುವ್ಯವಸ್ಥೆ ಕಾಪಾಡಲು ಮಾರ್ಗಸೂಚಿ ಬಿಡುಗಡೆ

Update: 2023-12-26 08:46 GMT

ನಗರ ಪೊಲೀಸ್​ ಆಯುಕ್ತ ಬಿ.ದಯಾನಂದ್ Photo: ANI

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಯಲ್ಲಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಸಕಲ ಸಿದ್ದತೆ ನಡೆಸುತ್ತಿದ್ದು,  ಈ ಬಗ್ಗೆ‌ ನಗರ ಪೊಲೀಸ್​ ಆಯುಕ್ತ ಬಿ.ದಯಾನಂದ್ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.

ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ತೆಗೆದುಕೊಳ್ಳಲಾದ್ದು, ಜನಸಂದಣಿ ಇರುವ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ  ಸ್ಟಾರ್ ಹೋಟೆಲ್, ಪಬ್ , ಕ್ಲಬ್​​ಗಳ ಏರಿಯಾಗಳಲ್ಲೂ ಬಂದೋಬಸ್ತ್ ಪಾಯಿಂಟ್​ಗಳ ನಿಯೋಜನೆ ಮಾಡಲಾಗಿದೆ. ಬಿಬಿಎಂಪಿ, ಮೆಟ್ರೋ, ಬಿಎಂಟಿಸಿ, ಅಬಕಾರಿ, ಆರೋಗ್ಯ ಇಲಾಖೆ, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ, ಬಿಎಂಆರ್​ಸಿಎಲ್, ಬೆಸ್ಕಾಂ ಜೊತೆಗೆ ಮಾತುಕತೆ ನಡೆಸಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ, ಫೀನಿಕ್ಸ್ ಮಾಲ್, ಕ್ಲಬ್​ ಗಳ ಮುಂಭಾಗ ಬಿಗಿ ಪೊಲೀಸ್ ಭದ್ರತೆ ಮಾಡಲಾಗುತ್ತಿದ್ದು, ಮಹಿಳೆಯರ ಸುರಕ್ಷತೆಗಾಗಿ ಸೇಫ್ ಟೀಂ ಐಲ್ಯಾಂಡ್​ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ಮಕ್ಕಳು ಕಾಣೆಯಾದರೆ ಕಳುವು ಬಗ್ಗೆ ಮಾಹಿತಿ ನೀಡಲು ಪೊಲೀಸ್ ಕಿಯೋಸ್ಕ್​ಗಳು ಇರಲಿವೆ. ಸೂಕ್ತ ಕಣ್ಗಾವಲು ಪ್ರದೇಶದಲ್ಲಿ ವಾಚ್ ಟವರ್ ಗಳ ನಿರ್ಮಾಣ, ಬೈನಾಕ್ಯುಲರ್ ಮೂಲಕ ವೀಕ್ಷಣೆ ಮಾಡಲಾಗುತ್ತದೆ. ಉಳಿದಂತೆ ಇಂದಿರಾನಗರ ಹಾಗೂ ಕೋರಮಂಗಲದಲ್ಲೂ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಡ್ರಗ್ಸ್ ಸೇವನೆಗೆ ಅವಕಾಶ ಇಲ್ಲ. ಈಗಾಗಲೇ ಡ್ರಗ್ಸ್ ಪೆಡ್ಲರ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಅನಧಿಕೃತವಾಗಿ ಮದ್ಯ ಶೇಖರಣೆ ಮಾಡುವುದುದು, ಬ್ಲಾಕ್ ನಲ್ಲಿ ಮಾರಾಟ ಮಾಡುವವರ ಮೇಲೆಯೂ ನಿಗಾ ಇರಿಸಲಾಗಿದೆ. ಪ್ರಮುಖ ಸ್ಥಳದಲ್ಲಿ ಡ್ರೋಣ್ ಕ್ಯಾಮೆರಾಗಳ ಬಳಕೆ ಮಾಡಲಾಗುತ್ತಿದೆ. ನಗರಾದ್ಯಂತ 10 ಸಾವಿರಕ್ಕೂ ಮಿಕ್ಕ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಹೋಂ ಗಾರ್ಡ್​ಗಳನ್ನು ಸಹ ನಿಯೋಜನೆ ಮಾಡಲಾಗುತ್ತದೆ ಎಂದು ಹೇಳಿದರು.

ನಗರದ ಭದ್ರತೆಗಾಗಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಒಬ್ಬ ಜಂಟಿ ಪೊಲೀಸ್ ಆಯುಕ್ತ, 15 ಡಿಸಿಪಿ, 160 ಇನ್​ಸ್ಪೆಕ್ಟರ್, 600 ಸಬ್​ ಇನ್​ಸ್ಪೆಕ್ಟರ್, 600 ಎಎಸ್​ಐ, 1,800 ಹೆಡ್​​ ಕಾನ್​​ ಸ್ಟೆಬಲ್ ಮತ್ತು 5,200 ಪೊಲೀಸ್ ಕಾನ್​​ ಸ್ಟೆಬಲ್ ಗಳನ್ನು ನಿಯೋಜಿಸಲಾಗಿದೆ.

ಡಿ.31ರಂದು ರಾತ್ರಿ 11 ಗಂಟೆಯಿಂದ ಎಲ್ಲಾ ಫ್ಲೈಓವರ್ ಗಳು ಬಂದ್ ಆಗಲಿದೆ. ರಾತ್ರಿ ಒಂದು ಗಂಟೆವರೆಗೆ ಮಾತ್ರ ಹೊಸ ವರ್ಷ ಆಚರಣೆಗೆ ಅವಕಾಶ ನೀಡಲಾಗಿದೆ. ಒಂದು ಗಂಟೆಗೆ ಹೋಟೆಲ್, ಬಾರ್ ಸೇರಿದಂತೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಬೇಕು. ಮಾಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆಗಳಿರುವುದರಿಂದ ಅಲ್ಲಿಯೂ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

48 ನಾಕಾಬಂದಿಗಳನ್ನು ಮಾಡಲಾಗಿದೆ. ವ್ಹೀಲಿಂಗ್ ಹಾಗೂ ಡ್ರ್ಯಾಗ್ ರೇಸಿಂಗ್ ಗೆ ಕಡಿವಾಣ ಹಾಕಲು ಸಿದ್ಧತೆ ಮಾಡಲಾಗಿದೆ. 48 ಕಡೆಗಳಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News