ನನ್ನ ಪರವಾಗಿ ಮಾತನಾಡಿರುವ ಶಾಸಕ ಇಕ್ಬಾಲ್ ಹುಸೇನ್ ಗೂ ನೋಟಿಸ್: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು, ನ.4: 'ನನಗೆ ಸರಕಾರದಲ್ಲಿ ಯಾವ ಶಾಸಕರ ಬೆಂಬಲವೂ ಬೇಡ. ನನ್ನ ಪರವಾಗಿ ಮಾತನಾಡಿರುವ ಶಾಸಕ ಇಕ್ಬಾಲ್ ಹುಸೇನ್ ಗೂ ನೋಟಿಸ್ ಜಾರಿ ಮಾಡುತ್ತೇನೆ' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಕುಮಾರಕೃಪಾ ಅತಿಥಿ ಗೃಹದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನನ್ನ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಚುನಾವಣೆ ನಡೆಸಿದ್ದು, ರಾಜ್ಯದ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಉತ್ತಮ ಆಡಳಿತ ನೀಡುವುದು ನಮ್ಮ ಗುರಿ. ನನಗೆ ಯಾವುದಕ್ಕೂ ಆತುರವಿಲ್ಲ. ನಾನು ಯಾರಿಗೂ ಬೆಂಬಲ ನೀಡಿಲ್ಲ. ನಮ್ಮ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಮ್ಮ ಪಕ್ಷದ ನಾಯಕರಿಗೆ ಏನು ಹೇಳಬೇಕೋ ಹೇಳಿದ್ದೇವೆ'' ಎಂದು ಅವರು ಹೇಳಿದರು.
''ಸಿದ್ದರಾಮಯ್ಯ ಅವರು ಹೇಳಿದ್ದನ್ನು ಮಾಧ್ಯಮಗಳು ತಿರುಚಿವೆ. ಸಿದ್ದರಾಮಯ್ಯ ನಮ್ಮ ನಾಯಕರು. ನಾವು ಅವರ ನಾಯಕತ್ವ ಒಪ್ಪಿದ್ದೇವೆ. ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ'' ಎಂದು ಶಿವಕುಮಾರ್ ತಿಳಿಸಿದರು.
ಕುಮಾರಸ್ವಾಮಿ ನಿಮ್ಮ ಬಗ್ಗೆ ಪ್ರೀತಿ ತೋರಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಕುಮಾರಸ್ವಾಮಿ ಅವರಿಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆ, ದಿಲ್ಲಿಯಲ್ಲಿ ಏನು ಮಾತನಾಡಿದ್ದಾರೆ, ಯಾರ ಯಾರ ಬಳಿ ಏನೇನು ಮಾತನಾಡಿದ್ದಾರೆ, ನನ್ನ ವಿಚಾರದಲ್ಲಿ ಏನೇನು ದೊಡ್ಡ ಪ್ಲಾನ್ ಗಳು ನಡೆಯುತ್ತಿವೆ ಎಂಬುದು ನನಗೆ ಗೊತ್ತಿದೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
'ಅವರ ಜೊತೆಯಲ್ಲಿದ್ದವರೆ ನನಗೆ ಮಾಹಿತಿ ನೀಡಿದ್ದಾರೆ. ನಮಗೆ ಜನ ಆಶೀರ್ವಾದ ಮಾಡಿದ್ದು, ಅವರಿಗೆ ಉತ್ತಮ ಕೆಲಸ ಮಾಡೋಣ. ಕುಮಾರಸ್ವಾಮಿ ಅವರಿಗೆ ನಿಜಕ್ಕೂ ನನ್ನ ಮೇಲೆ ಪ್ರೀತಿ ಇದ್ದರೆ ಮೈತ್ರಿ ಸರಕಾರ ಬಿದ್ದ ನಂತರ ನಡೆದ ಘಟನೆಗಳು, ಅವರು ಆಡಿರುವ ಮಾತುಗಳನ್ನು ನೆನಪು ಮಾಡಿಕೊಂಡು ತಮ್ಮ ಆತ್ಮಸಾಕ್ಷಿಗೆ ಉತ್ತರ ನೀಡಲಿ' ಎಂದು ಶಿವಕುಮಾರ್ ತಿಳಿಸಿದರು.