‘ಎಐ’ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮೇಲೆ ನಿಗಾ: ಡಿ.ಕೆ. ಶಿವಕುಮಾರ್

Update: 2024-01-13 18:33 GMT

Photo:X/@DKShivakumar

ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮೇಲೆ ನಿಗಾ ಇಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶನಿವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2024 ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, 3 ವರ್ಷಗಳಲ್ಲಿ 6 ಸಾವಿರಕ್ಕೂ ಹೆಚ್ಚು ಚಾಲನೆ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ. ಎನ್‍ಸಿಆರ್‍ಬಿ ಅಂಕಿಅಂಶಗಳ ಪ್ರಕಾರ ಬೈಕ್ ಅಪಘಾತಗಳಿಂದ ಅತ್ಯಂತ ಹೆಚ್ಚು ಮರಣಗಳಾಗಿವೆ. ಆದ ಕಾರಣ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ನಮ್ಮ ಕಾಂಗ್ರೆಸ್ ಸರಕಾರ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ ನೀಡಲು ಹರೀಶ್ ಸಾಂತ್ವನ ಯೋಜನೆ ಜಾರಿಗೆ ತಂದಿತ್ತು. ಆದರೆ ಅಪಘಾತವಾಗಿ ಹೋದ ಜೀವ ಮತ್ತೆ ಮರಳಿ ತರಲು ಸಾಧ್ಯವೇ? ಪಾದಚಾರಿ ಮಾರ್ಗದ ಮೇಲೆ ವಾಹನ ಚಲಾಯಿಸುವುದು, ಸಿಗ್ನಲ್ ಜಂಪ್ ಮಾಡಿ ವಾಹನ ಚಲಾಯಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಹೇಳಿದರು.

ಇನ್ನೂ, ಪಾದಚಾರಿಗಳ ಅನುಕೂಲ, ಸುಗಮ ಸಂಚಾರಕ್ಕಾಗಿ ಹೈಕೋರ್ಟ್ ಆದೇಶದಂತೆ ಪಾದಚಾರಿ ಮಾರ್ಗ ವ್ಯಾಪಾರಿಗಳನ್ನು ತೆರವು ಮಾಡಲಾಗಿದೆ. ಪಾದಚಾರಿ ಮಾರ್ಗ ಇರುವುದು ಜನ ಓಡಾಡಲು. ಇಂತಹ ವ್ಯಾಪಾರಿಗಳು ನೋಂದಣಿ ಮಾಡಿಕೊಂಡು ರಸ್ತೆಯ ಒಂದು ಕಡೆ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಅವರಿಗೆ ಆರ್ಥಿಕ ನೆರವು ನೀಡಲು ನಾವು ಸಿದ್ಧ. ಆದರೆ ಪಾದಚಾರಿ ಮಾರ್ಗದಲ್ಲಿ ಟೆಂಟ್ ಹಾಕಿಕೊಂಡು ವ್ಯಾಪಾರ ಮಾಡಿದರೆ ಪಾದಚಾರಿಗಳು ಎಲ್ಲಿ ಓಡಾಡಬೇಕು ಎಂದು ತಿಳಿಸಿದರು.

ಪ್ರಿಯಾಂಕಾ ಗಾಂಧಿ ಸ್ಪರ್ಧೆ ಗೊತ್ತಿಲ್ಲ: ‘ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕರ್ನಾಟಕ ಅಥವಾ ತೆಲಂಗಾಣದಲ್ಲಿ ಸ್ಪರ್ಧೆ ಮಾಡುವ ಚರ್ಚೆ ಬಗ್ಗೆ ಕೇಳಿದಾಗ, ಈ ಬಗ್ಗೆ ನಿಮಗೆ ಮಾಹಿತಿ ಇರಬಹುದು. ನನಗೆ ಮಾಹಿತಿ ಇಲ್ಲ, ನನ್ನ ಜತೆ ಯಾರು ಮಾತನಾಡಿಲ್ಲ’ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News