ಶಾಲೆಗಳಲ್ಲಿ ದ್ವಿ-ಭಾಷಾ ವಿಭಾಗಗಳು ಕಾಲಮಿತಿಯಲ್ಲಿ ಆರಂಭ: ಸಚಿವ ಮಧು ಬಂಗಾರಪ್ಪ

Update: 2024-02-15 08:11 GMT

ಬೆಂಗಳೂರು, ಫೆ.15: ರಾಜ್ಯದಲ್ಲಿರುವ ಶಾಲೆಗಳಲ್ಲಿ ದ್ವಿ-ಭಾಷಾ ವಿಭಾಗಗಳನ್ನು ಕಾಲಮಿತಿಯಲ್ಲಿ ಆರಂಭಿಸಲು ಸರಕಾರ ಉದ್ದೇಶಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದ್ದಾರೆ.

ಶಾಸಕ ಅರಗ ಜ್ಞಾನೇಂದ್ರ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಈಗ ಆಂಗ್ಲ ಮಾಧ್ಯಮಕ್ಕೆ ಹೆಚ್ಚಿನ ಬೇಡಿಕೆ ಇದೆ. ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಸಬೇಕೆಂಬ ಹೊಂದಿದ್ದು, ಇದು ಕೂಡ ನಮ್ಮ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣ ಎಂಬುದು ಗೊತ್ತಾಗಿದೆ ಎಂದ ಸಚಿವರು, ಶಾಲೆಗಳಲ್ಲಿ ದ್ವಿ-ಭಾಷಾ ವಿಭಾಗಗಳನ್ನು ಹಂತಹಂತವಾಗಿ ಪ್ರಾರಂಭಿಸಲಾಗುವುದು ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 30 ದ್ವಿ-ಭಾಷಾ ವಿಭಾಗ ಮತ್ತು 2020-21ನೇ ಸಾಲಿನಲ್ಲಿ 59 ದ್ವಿ-ಭಾಷಾ ವಿಭಾಗಗಳನ್ನು ಪ್ರಾರಂಭಿಸಲಾಗಿದೆ. ಈ ಪೈಕಿ ತೀರ್ಥಹಳ್ಳಿ ಕ್ಷೇತ್ರದಲ್ಲಿ 15 ದ್ವಿ-ಭಾಷಾ ವಿಭಾಗಗಳನ್ನು ಪ್ರಾರಂಭಿಸಲಾಗಿದ್ದು, ಪ್ರಸಕ್ತ ನಡೆಯುತ್ತಿರುವ ದ್ವಿ-ಭಾಷಾ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರುಗಳಿಗೆ ಕಾಲಕಾಲಕ್ಕೆ ಅಗತ್ಯತೆಯನುಸಾರ ಇಎಂಟಿಐಪಿ ತರಬೇತಿ ನೀಡುವುದರ ಮೂಲಕ ಸದೃಢಗೊಳಿಸಲಾಗುತ್ತಿದೆ. ಈ ಮೂಲಕ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News