ತಂದೆಯ ಭೇಟಿಗೆ ಹೋದರೆ ಪೊಲೀಸರನ್ನು ಕರೆಸುತ್ತಾರೆ: ಬಿಜೆಪಿ ನಾಯಕ ಸಿಪಿ ಯೋಗೀಶ್ವರ್ ವಿರುದ್ಧ ಪುತ್ರಿ ಆಕ್ರೋಶ

Update: 2024-05-22 18:47 GMT

ರಾಮನಗರ: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೊಗೇಶ್ವರ್ ಮತ್ತು ಅವರ ಎರಡನೇ ಪತ್ನಿ ವಿರುದ್ಧ ಮೊದಲನೇ ಪತ್ನಿಯ ಪುತ್ರಿ ನಿಶಾ ಯೋಗೇಶ್ವರ್ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಶಾ ಯೋಗೇಶ್ವರ್ ಅವರು ಕೌಟುಂಬಿಕ ಸಮಸ್ಯೆಗಳ ಕುರಿತು ಮಾತನಾಡಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಶಾ ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯೂ ಮಾಡಿದ್ದರು.

ನಿಶಾ ಅವರ ವೈರಲ್‌ ವೀಡಿಯೊ ರಾಮನಗರ ಜಿಲ್ಲೆಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ. ವೀಡಿಯೊದಲ್ಲಿ ನಿಶಾ ಅವರು, ‘ನನ್ನ ತಂದೆ ಮತ್ತು ಚಿಕ್ಕಮ್ಮ (ಮಲತಾಯಿ) ಮೊದಲನೇ ಪತ್ನಿಯ ಮಗಳಾದ ನನ್ನನ್ನು ಬೆಳೆಸಿ ಆದರ್ಶವಾಗಲಿಲ್ಲ. ತಂದೆಯ ಭೇಟಿಗೆ ಹೋದರೆ ಪೊಲೀಸರನ್ನು ಕರೆಸುತ್ತಾರೆ. ಮಾತನಾಡಿಸಲು ಮುಂದಾದರೆ ಕಪಾಳಕ್ಕೆ ಹೊಡೆಯುತ್ತಾರೆ. ನಿನಗೆ ಒಂದು ರೂಪಾಯಿ ಕೂಡ ಕೊಡುವುದಿಲ್ಲ. ಭಿಕ್ಷೆ ಬೇಡಿ ಬದುಕು ಎನ್ನುತ್ತಾರೆ. ನನ್ನ ಬದುಕಿನಿಂದ ತಂದೆ ಹೊರ ಹೋದಾಗಿನಿಂದಲೂ ವನವಾಸ ಅನುಭವಿಸುತ್ತಲೇ ಇದ್ದೇನೆ’ ಎಂದು ಅಳಲು ತೋಡಿಕೊಂಡಿದ್ದಾರೆ.

‘ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನು ವೀಡಿಯೊ ಪೋಸ್ಟ್ ಮಾಡಿದ್ದೆ. ನನ್ನ ಹೆಸರಿನ ಮುಂದೆ ತಮ್ಮ ಹೆಸರನ್ನು ಬಳಸದಂತೆ ನನ್ನ ತಂದೆ ತಾಕೀತು ಮಾಡಿದರು. ಅವರ ಹೆಸರು ಇಲ್ಲದೆ ನನಗೆ ಅಸ್ತಿತ್ವವೇ ಇಲ್ಲ ಎಂದು ಹೀಯಾಳಿಸಿದ್ದಾರೆ. ಈ ಬಗ್ಗೆ ನಾನು ಮಾತನಾಡಲು ಇಷ್ಟಪವಿಲ್ಲವಾದರೂ ಮಾತನಾಡಲೇಬೇಕಾದ ಪರಿಸ್ಥಿತಿ ಬಂದಿದೆ’ ಎಂದು ವೀಡಿಯೊದಲ್ಲಿ ನಿಶಾ ತಿಳಿಸಿದ್ದಾರೆ.

‘ನಾನು ಹತ್ತು ವರ್ಷವಿದ್ದಾಗಲೇ ನನ್ನ ತಂದೆ ನಮ್ಮ ಬದುಕಿನಿಂದ ಹೊರ ಹೋಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅವರು ಕರೆದಾಗ ಅವರ ಪರ ಪ್ರಚಾರ ಮಾಡಿದ್ದೆ. ಅವರು ಹೇಳಿದಂತೆ ಕೆಲಸ ಮಾಡಿದಾಗ, ನಡೆದುಕೊಂಡಾಗ ಎಲ್ಲವೂ ಚೆನ್ನಾಗಿತ್ತು. ಈಗ 24 ವರ್ಷದ ನಂತರ ನನ್ನ ಬಗ್ಗೆ ಯೋಚಿಸಿದ್ದಕ್ಕೆ ಆದರ್ಶ ಮಗಳಾಗದೆ ಯಾರಿಗೂ ಬೇಡವಾಗಿದ್ದೇನೆ. ತಂದೆ ಹೆಸರನ್ನು ಬಳಸಬಾರದೆಂಬ ಮಾತು ಬರುತ್ತಿವೆ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

‘ತಂದೆಯ ಹೆಸರು ಬಳಸದಂತೆ ಕಮೆಂಟ್ ಮಾಡುತ್ತಿರುವವರು ಯಾರೆಂದು ಗೊತ್ತು. ಅವರೆಲ್ಲರೂ ಒಂದು ಕಡೆ ಸೇರಿ ನನ್ನ ಆಧಾರ್, ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳಲ್ಲಿ ತಂದೆಯ ಹೆಸರನ್ನು ಹೇಗೆ ತೆಗೆಯಬೇಕೆಂದು ಹೇಳಲಿ. ಹೆಸರು ತೆಗೆದರೆ ಅವರು ನನ್ನ ತಂದೆ ಎಂಬ ಸತ್ಯ ಇಲ್ಲವಾಗುತ್ತದೆಯೇ? 24 ವರ್ಷದ ಹಿಂದೆ ಅವರ ಜೀವನದಿಂದ ನನ್ನನ್ನು ತೆಗೆದುಬಿಟ್ಟಿರಿ. ಈಗ ಹೆಸರಿನ ಮುಂದೆಯೇ ಅವರನ್ನು ತೆಗೆಯಲು ಮುಂದಾಗಿದ್ದೀರಾ?’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ ನನ್ನ ತಾಯಿಗೆ ತಂದೆ ಕಪಾಳಕ್ಕೆ ಹೊಡೆದರು. ಚಿಕ್ಕಮ್ಮನ ಮಗ ನನ್ನ ತಮ್ಮನಿಗೆ ಹೊಡೆದ. ಮನೆಗೆ ಬಂದು ಸಾಮಗ್ರಿ ಹೊರ ಹಾಕಿದ್ದರು. ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಂದಾಗ ಅವರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದೆ. ಆದರೆ ಬೇಕೆಂದೇ ಭೇಟಿ ಮಾಡಿಸಲಿಲ್ಲ. ಇದೆಂಥಾ ನ್ಯಾಯ‘ ಎಂದು ನಿಶಾ ಯೋಗೀಶ್ವರ್ ಪ್ರಶ್ನಿಸಿದ್ದಾರೆ.

'ನಿಮ್ಮ ಮಗಳಿಗೆ ಯಾಕೆ ಒಂದು ದಾರಿ ತೋರಿಸಲಿಲ್ಲ ಎಂದು ನನ್ನ ತಂದೆಯನ್ನು ಪ್ರಶ್ನಿಸಿ. ನನ್ನಿಂದ ಮಾತ್ರ ಸರಿಯಾದುದನ್ನು ಬಯಸಿದರೆ ಸಾಕೇ? ಅವರು ಸರಿಯಾಗಿರಬೇಕಲ್ಲವೇ? ಮಾತನಾಡಲು ನನ್ನ ಬಳಿ ಸಾಕಷ್ಟಿದೆ. ನನ್ನನ್ನು ಶಾಂತವಾಗಿರಲು ಬಿಡಿ. ಇಲ್ಲದಿದ್ದರೆ ನೀವು ಎಲ್ಲಿ ತಲೆ ಎತ್ತಿ ನಡೆಯುವುದಕ್ಕೆ ಸಾಧ್ಯವಾಗುವುದಿಲ್ಲವೊ ಅಲ್ಲಿಗೆ ವೀಡಿಯೊಗಳನ್ನು ಕಳಿಸುತ್ತೇನೆ’ ಎಂದು ನಿಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News