ಕಚೇರಿಗಳಲ್ಲಿ ದಲ್ಲಾಳಿಗಳಿಗೆ ಪ್ರವೇಶ ಇಲ್ಲ: ಕೆಐಎಡಿಬಿ ಸುತ್ತೋಲೆ
ಬೆಂಗಳೂರು, ಜು. 23: ‘ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ಭೂಮಿ ಕಳೆದುಕೊಂಡ ರೈತರ ಪರ ಕೆಐಎಡಿಬಿ ಕೇಂದ್ರ ಕಚೇರಿ ಮತ್ತು ವಲಯ ಕಚೇರಿಗಳಲ್ಲಿ ಕಾಣಿಸಿಕೊಳ್ಳುವ ದಲ್ಲಾಳಿಗಳು/ಮಧ್ಯವರ್ತಿಗಳ ಜೊತೆ ಕೈಜೋಡಿಸುವ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಎಚ್ಚರಿಸಿದ್ದಾರೆ.
ರವಿವಾರ ಮಾತನಾಡಿರುವ ಅವರು, ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ. ‘ಕೆಐಎಡಿಬಿ ಕಚೇರಿಗಳಲ್ಲಿ ಸಂತ್ರಸ್ತ ರೈತರ ಪರವಾಗಿ ಮತ್ತು ಕೈಗಾರಿಕಾ ನಿವೇಶನಗಳು ಮಂಜೂರಾಗಿರುವ ಉದ್ಯಮಿಗಳ ಅಥವಾ ನಿವೇಶನದಾರರ ಹೆಸರಿನಲ್ಲಿ ಕೆಲವು ಅನಪೇಕ್ಷಿತ ವ್ಯಕ್ತಿಗಳು ಠಳಾಯಿಸುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜಮೀನು ಕಳೆದುಕೊಂಡ ರೈತರು ಅಥವಾ ಕಾನೂನುಬದ್ಧ ವಾರಸುದಾರರು/ಪ್ರತಿನಿಧಿಗಳು ಮಾತ್ರ ಕಚೇರಿಗಳಿಗೆ ಭೇಟಿ ನೀಡಿ, ಅಹವಾಲು ಸಲ್ಲಿಸಬಹುದು' ಎಂದು ಹೇಳಿದ್ದಾರೆ.
ಸರಕಾರವು ಹೊರಡಿಸಿರುವ ಸುತ್ತೋಲೆಯನ್ನು ಕೆಐಎಡಿಬಿ ಕಚೇರಿಗಳಲ್ಲಿ ಕೂಡಲೇ ಕಡ್ಡಾಯವಾಗಿ ಪ್ರದರ್ಶಿಸಬೇಕು. ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವಂತಹ ಶಕ್ತಿಗಳಿಗೆ ಅಂಕುಶ ಹಾಕಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕೆಐಎಡಿಬಿ ಕಚೇರಿ ಇದರ ಅನುಸಾರವಾಗಿ ಕಾರ್ಯವನ್ನೂ ಮಾಡಬೇಕು ಎಂದು ಅವರು ನಿರ್ದೇಶಿಸಿದ್ದಾರೆ.