ಈಗಿನ ಸರಕಾರದಲ್ಲಿ ಯಾವ ಸಚಿವರೂ ಕಮಿಷನ್ ಕೇಳಿಲ್ಲ: ಡಿ.ಕೆಂಪಣ್ಣ ಸ್ಪಷ್ಟನೆ
ಬೆಂಗಳೂರು, ಆ.11: ‘ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಯಾವ ಸಚಿವರೂ ನಮ್ಮ ಸಂಘದ ಗುತ್ತಿಗೆದಾರರ ಬಳಿ ಕಮಿಷನ್ ಹಣವನ್ನು ಕೇಳಿಲ್ಲ’ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿರುವ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ಸರಕಾರದ ಯಾವ ಸಚಿವರೂ ನಮ್ಮ ಬಳಿ ಕಮಿಷನ್ ಕೇಳಿಲ್ಲ. ಆದರೆ ಬಿಬಿಎಂಪಿ ಗುತ್ತಿಗೆದಾರರು ಉದ್ದೇಶ ಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಬಾಕಿ ಬಿಲ್ ಪಾವತಿ ವಿಚಾರವಾಗಿ ವಿರೋಧ ಪಕ್ಷದ ನಾಯಕ ಇದ್ದರೆ ಹೋಗಿ ಮಾತನಾಡಬಹುದಿತ್ತು. ಆದರೆ ಈಗ ವಿರೋಧ ಪಕ್ಷದ ನಾಯಕನೇ ಇಲ್ಲ. ಹೀಗಾಗಿ ಬಿಬಿಎಂಪಿ ಗುತ್ತಿಗೆದಾರರು ಬಿಜೆಪಿಯವರನ್ನು ಭೇಟಿ ಮಾಡುವ ಅನಿವಾರ್ಯತೆ ಏನಿದೆ ಎಂದು ಪ್ರಶ್ನಿಸಿದರು.
ಬಿಬಿಎಂಪಿ ಗುತ್ತಿಗೆದಾರರ ಸಂಘದವರು ಶೇ.15 ಕಮಿಷನ್ ಆರೋಪ ಮಾಡುತ್ತಿದ್ದಾರೆ. ನಮ್ಮ ರಾಜ್ಯ ಗುತ್ತಿಗೆದಾರರ ಸಂಘದವರು ಯಾವುದೇ ಆರೋಪ ಮಾಡುತ್ತಿಲ್ಲ. ನೂತನ ಸರಕಾರ ಬಂದ ನಂತರ ಮೂರ್ನಾಲ್ಕು ತಿಂಗಳಿನಿಂದ ಯಾವುದೇ ಕಾಮಗಾರಿ ನಡೆದಿಲ್ಲ. ಹೀಗಿರುವಾಗ ಸಚಿವರಿಗೆ ಕಮಿಷನ್ ಕೊಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಅವರು ಹೇಳಿದರು.
ಬಾಕಿ ಪಾವತಿಗೆ ಆ.31ರ ವರೆಗೆ ಗಡುವು: ರಾಜ್ಯದ ಗುತ್ತಿಗೆದಾರರ 25ಸಾವಿರ ಕೋಟಿ ರೂ.ಬಿಲ್ ಬಾಕಿ ಇದೆ. 7 ತಿಂಗಳಿನಿಂದ ಗುತ್ತಿಗೆದಾರರ ಬಾಕಿ ಬಿಡುಗಡೆಯಾಗಿರುವುದಿಲ್ಲ. ಚುನಾವಣೆ ಗಡಿಬಿಡಿ, ನೀತಿ ಸಂಹಿತೆ ಮೊದಲಾದ ಕಾರಣಗಳಿಗಾಗಿಯೂ ಬಾಕಿ ಮೊತ್ತ ಬಿಡುಗಡೆಯಾಗಲಿಲ್ಲ. ರಾಜ್ಯ ಸರಕಾರವು ಆ.31ರೊಳಗೆ ಗುತ್ತಿಗೆದಾರರ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಚುನಾವಣೆ ಮುಗಿದು ಆ.20ಕ್ಕೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆಯುತ್ತದೆ. ಈ ಅವಧಿಯಲ್ಲಿಯೂ ಗುತ್ತಿಗೆದಾರರ ಬಾಕಿ ಬಿಡುಗಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಗುತ್ತಿಗೆದಾರರ ಸಂಘದ ಪರವಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ತಲಾ ಎರಡು ಬಾರಿ ಭೇಟಿಯಾಗಿ ಕಳಕಳಿಯಿಂದ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ಸರಕಾರ ಜೂ.28 ಮತ್ತು ಜು.30 ರಂದು ಗುತ್ತಿಗೆದಾರರ ಬಾಕಿ ಮೊತ್ತವನ್ನು ಹಣ ಬಿಡುಗಡೆ ಮಾಡುವುದು ಎಂದು ಸುತ್ತೋಲೆ ಹೊರಡಿಸಿದೆಯಾದರೂ ಕಾರ್ಯರೂಪಕ್ಕೆ ಬಂದಿಲ್ಲ. ಸಂಬಂಧಪಟ್ಟ ಸಚಿವರಿಂದ ಆದೇಶ ಬಂದಿರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮಧ್ಯೆ ಸಂಘ ಸುಮ್ಮನೆ ಕೂರದೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರಿಗೂ ನಿರಂತರವಾಗಿ ನೆನಪು ಮಾಡುತ್ತಲೇ ಬಂದಿದೆ ಎಂದು ಸ್ಪಷ್ಟಪಡಿಸಿದರು.
ಸಂಘದ ವತಿಯಿಂದ ನಮ್ಮ ಜಿಲ್ಲಾ ಆಯಾ ಜಿಲ್ಲೆಗಳ ಮಟ್ಟದಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರಗಳನ್ನು ಸಲ್ಲಿಸಿರುತ್ತಾರೆ. ಆದರೂ ಸರಕಾರ ಗುತ್ತಿಗೆದಾರರ ಸಂಕಟವನ್ನು ಆಲಿಸಲು ಸಿದ್ಧವಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದ ಅವರು, ಗುತ್ತಿಗೆದಾರರಿಗೆ ಬಿಡುಗಡೆ ಮಾಡಲೆಂದೇ ಸರಕಾರ ಬಿಬಿಎಂಪಿಗೆ 675 ಕೋಟಿ ರೂ.ಹಣವನ್ನು ಬಿಡುಗಡೆ ಮಾಡಿದೆ. ಆದರೂ ಸರಕಾರ ಬಿಬಿಎಂಪಿ ಆಯುಕ್ತರು ಮೇಲಿನಿಂದ ಆದೇಶ ಬಂದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.