'ಫ್ಯಾಮಿಲಿ ಜನತಾ ಪಾರ್ಟಿ'ಯಲ್ಲಿ ಇನ್ನು ನಿವೃತ್ತಿ ಪರ್ವ: ಕಾಂಗ್ರೆಸ್ ಟೀಕೆ

Update: 2023-11-11 13:24 GMT

ಬೆಂಗಳೂರು, ನ. 11: ‘ಬಿ.ಎಸ್.ಯಡಿಯೂರಪ್ಪನವರ ಮಗನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡುವ ಮೂಲಕ ಬಿಜೆಪಿ ಲೀಡರ್ ಲೆಸ್ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.

ಶನಿವಾರ ಎಕ್ಸ್(ಟ್ವಿಟ್ಟರ್)ನಲ್ಲಿ ಸರಣಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ದಶಕಗಳ ಕಾಲ ಪಕ್ಷದಲ್ಲಿ ದುಡಿದವರು ಹಲವರಿದ್ದರೂ ‘ಎಳೆ ಹುಡುಗ’ನಿಗೆ ಪಟ್ಟ ಕಟ್ಟುವ ಮೂಲಕ ಉಳಿದವರೆಲ್ಲ ಅನರ್ಹರು ಎಂಬ ಸಂದೇಶ ನೀಡಿದ್ದೇ ಅಥವಾ ಕುಟುಂಬ ರಾಜಕಾರಣಕ್ಕೆ ಮಣಿದಿದ್ದೇ? ಬಿಜೆಪಿ ಉತ್ತರಿಸುವುದೇ?’ ಎಂದು ಪ್ರಶ್ನಿಸಿದೆ.

‘ಸಿ.ಟಿ.ರವಿ ಅವರೇ, ಈಗ ಯಡಿಯೂರಪ್ಪನವರ ಕಿಚನ್ ಕ್ಯಾಬಿನೆಟ್‍ನಲ್ಲೇ ಎಲ್ಲವೂ ನಿರ್ಧಾರವಾಗಲಿದೆ, ಅವರ ಕಿಚನ್ ಕ್ಯಾಬಿನೆಟ್‍ಗೆ ತಾವು ಹೋಗುವಿರಾ ಅಥವಾ ತಾವೂ ರಾಜಕೀಯ ನಿವೃತ್ತಿ ಪಡೆಯುವಿರಾ? ಯತ್ನಾಳ್ ಅವರೇ, ಇದೆಂತಹಾ ತಾವು ತಮ್ಮ ಅಸ್ತಿತ್ವಕ್ಕಾಗಿ ವಿಜಯೇಂದ್ರರ ಮುಂದೆ ಕೈಕಟ್ಟಿ ತಲೆಬಾಗಿಸಿ ನಿಲ್ಲುವಿರಾ ಅಥವಾ ರಾಜಕೀಯಕ್ಕೆ ಗುಡ್ ಬೈ ಹೇಳುವಿರಾ? ಫ್ಯಾಮಿಲಿ ಜನತಾ ಪಾರ್ಟಿಯಲ್ಲಿ ಇನ್ಮುಂದೆ ನಿವೃತ್ತಿ ಪರ್ವ ಶುರುವಾದರೂ ಆಶ್ಚರ್ಯವಿಲ್ಲ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

‘ಯಡಿಯೂರಪ್ಪನವರ ಮಗನ ರಾಜ್ಯಾಧ್ಯಕ್ಷ ಹುದ್ದೆ ಕೇವಲ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂಬ ಗುಸುಗುಸು ಪಿಸುಪಿಸು ಜಗನ್ನಾಥ ಭವನದಲ್ಲಿ ಕೇಳಿ ಬರುತ್ತಿದೆಯಂತೆ. ಇದು ಸಿ.ಟಿ.ರವಿ, ಯತ್ನಾಳ್, ಬಿ.ಎಲ್.ಸಂತೋಷ್ ಅವರು ಸಮಾಧಾನ ಮಾಡಿಕೊಳ್ಳುತ್ತಿರುವುದೋ, ಅಥವಾ ನೈಜತೆ ಇದೆಯೋ ಬಿಜೆಪಿ ಸ್ಪಷ್ಟಪಡಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News