ಕಾಂತರಾಜು ವರದಿಗೆ ವಿರೋಧವಿಲ್ಲ, ಸರಿಪಡಿಸಲಷ್ಟೇ ಕೋರಿಕೆ: ಸಚಿವ ಎಂ.ಬಿ ಪಾಟೀಲ್
ಬೆಂಗಳೂರು: ಕಾಂತರಾಜು ವರದಿಗೆ ನಮ್ಮ ವಿರೋಧವೇನೂ ಇಲ್ಲ. ಆದರೆ, ಅದನ್ನು ಸ್ವಲ್ಪಮಟ್ಟಿಗೆ ಸರಿಪಡಿಸುವಂತೆ ಮುಖ್ಯಮಂತ್ರಿ ಅವರಲ್ಲಿ ಕೇಳಿಕೊಂಡಿದ್ದೇವೆ ಎಂದು ಸಚಿವ ಎಂಬಿ ಪಾಟೀಲ್ ಮಂಗಳವಾರ ಸ್ಪಷ್ಟಪಡಿಸಿದರು.
ಹಿಂದುಳಿದ ವರ್ಗಗಳ ಸ್ವಾಮೀಜಿಗಳ ತಂಡವೊಂದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಕಾಂತರಾಜ ವರದಿ ಸ್ವೀಕರಿಸಲು ಆಗ್ರಹಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʼಈಗಿನ ನಿಯಮಗಳ ಪ್ರಕಾರ, ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡಗಳ ಹೆಸರನ್ನು ನಮೂದಿಸಿದರೆ ಸಮುದಾಯದ ಉಪಪಂಗಡಗಳಿಗೆ ಸೇರಿದವರಿಗೆ ಮೀಸಲಾತಿ ಸಿಗುವುದಿಲ್ಲ. ಆದ್ದರಿಂದ, ಸಮುದಾಯಕ್ಕೆ ಸೇರಿದವರು ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡದ ಹೆಸರು ಹಾಕುತ್ತಿಲ್ಲ. ಇದನ್ನು ಸರಿಪಡಿಸಿದರೆ, ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡಗಳ ಹೆಸರು ನಮೂದಿಸಲು ಸಾಧ್ಯವಾಗುತ್ತದೆ. ಹೀಗಾದಾಗ, ಸಹಜವಾಗಿಯೇ ಲಿಂಗಾಯತ ಸಮುದಾಯದ ಜನಸಂಖ್ಯೆ ಶೇ. 22ರವರೆಗೆ ಹೆಚ್ಚಾಗುವ ಸಂಭವವಿದೆʼ ಎಂದು ಅವರು ವಿವರಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು "ಬೆಳಗಾವಿ ಮುಂಚೆ ಮಹಾರಾಷ್ಟ್ರಕ್ಕೆ ಸೇರಿತ್ತು" ಎಂಬ ಹೇಳಿಕೆ ನೀಡಿರುವುದರ ಬಗ್ಗೆ ಕೇಳಿದಾಗ, "ಹೌದು, ಅವರು ಹೇಳಿರುವುದು ಐತಿಹಾಸಿಕ ಸತ್ಯ. ಅದು ಎಲ್ಲರಿಗೂ ಗೊತ್ತಿರುವಂತದ್ದೇ. ಅದನ್ನು ಹೇಳುವುದು ತಪ್ಪೇನೂ ಅಲ್ಲ. ಆದರೆ, ಮುಂಚೆ ಮುಂಬೈ, ಹೈದರಾಬಾದ್, ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟ ಪ್ರದೇಶಗಳು ಪುನರ್ ವಿಂಗಡಣೆ ನಂತರ ಸಮಗ್ರ ಕರ್ನಾಟಕದ ಭಾಗವಾಗಿವೆ. ಅಂತಹ ಎಲ್ಲಾ ಪ್ರದೇಶಗಳು ಈಗ ಸಮಗ್ರ ಕರ್ನಾಟಕದಲ್ಲೇ ಇವೆ" ಎಂದರು.