ಕುಮಾರಸ್ವಾಮಿ ಅವರನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ: ಎಚ್.ಡಿ.ದೇವೇಗೌಡ

Update: 2023-08-28 12:09 GMT

ಬೆಂಗಳೂರು: ''ಕುಮಾರಸ್ವಾಮಿ ಅವರು ಯಾರಿಗೂ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ ಹಾಗೂ ಅವರನ್ನು ಜೀರ್ಣಿಸಿಕೊಳ್ಳುವುದು ಸುಲಭ ಸಾಧ್ಯವೂ ಅಲ್ಲ'' ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ. 

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಜತೆ ಅವರು ಇಂದು ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು; "ನಾನು ಮನೆಯಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿದ್ದೇನೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪೆನ್ ಡ್ರೈವ್ ವಾದ, ವಿವಾದ ನೋಡಿದ್ದೇನೆ. ಅವರು ಅಷ್ಟು ಸುಲಭವಾಗಿ ಮಾತನಾಡುವುದಿಲ್ಲ. ಆ ವಿಷಯದ ಬಗ್ಗೆ ಟೀಕೆ ಮಾಡುವವರಿಗೆ ಅದು ತಿಳಿದಿರಲಿ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆèè ಎಂದು ಎಚ್ಚರಿಕೆ ನೀಡಿದರು.

ರಾಮನಗರದಿಂದ ಕನಕಪುರಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ''ಕುಮಾರಸ್ವಾಮಿ ಅವರು ದೇವೇಗೌಡರ ಮಗ ಎಂದು ಮಾತನಾಡುವುದಿಲ್ಲ. ನನಗೆ ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಎಲ್ಲವೂ ಒಂದೇ. ಆದರೆ ರಾಮನಗರ ಜಿಲ್ಲೆ ಮಾಡಿದ್ದು ಯಾರು? ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನನ್ನನ್ನು ಸೋಲಿಸಬೇಕೆಂದು ಪ್ರಯತ್ನ ಮಾಡಿದರು. ಸತ್ಯ ಹೇಳಿ? ಆದರೆ, ಅಂದೇ ರಾಮನಗರ ಜಿಲ್ಲೆ ಮಾಡಲು ಅವರಿಗೆ ಆಗ್ತಿರಲಿಲ್ವಾ? ಕುಮಾರಸ್ವಾಮಿಯವರೇ ಬಂದು ರಾಮನಗರವನ್ನು ಜಿಲ್ಲೆ ಮಾಡಬೇಕಿತ್ತಾ?'' ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

''ಅಂದು ಮೆಡಿಕಲ್ ಕಾಲೇಜು ಮಂಜೂರು ಆಗಿದ್ದು ಎಲ್ಲಿ? ಜಾಗ ಮಂಜೂರು ಆಗಿದ್ದು ಎಲ್ಲಿ? ಮಾಯಗೊಂಡನಹಳ್ಳಿ ಬಳಿ 9 ಎಕರೆ ಬಗ್ಗೆ ಕೆಲವರು ತಕರಾರು ತೆಗೆದರು. ಅದನ್ನು ಬಿಟ್ಟು ಕೆಲಸ ಶುರು ಮಾಡಿ ಎಂದರು. ಆಗ ಗೊಂದಲವಾಯಿತು. ಕನಕಪುರವೂ ಮನೆ ಇದ್ದಹಾಗೆ, ಆದರೆ, ರಾಮನಗರ ಜಿಲ್ಲಾ ಕೇಂದ್ರ ಸ್ಥಾನ. ಮೆಡಿಕಲ್ ಕಾಲೇಜ್ ವಿಚಾರದಲ್ಲೂ ರಾಜಕೀಯ ಮಾಡಬಾರದು. ಅವರದ್ಧೇ ಸರಕಾರವಿದೆ. ಕನಕಪುರಕ್ಕೆ ಇನ್ನೊಂದು ಕಾಲೇಜ್ ಮಾಡಲಿ. ನನ್ನದೇನೂ ತಕರಾರು ಇಲ್ಲ. ಆದರೆ, ರಾಮನಗರ ಮೆಡಿಕಲ್ ಕಾಲೇಜ್ ಗೆ ತೊಂದರೆ ಮಾಡಬೇಡಿ ಎಂದು ನ್ಯಾಯಯುತವಾಗಿ ಕೇಳುತ್ತಿದ್ದಾರೆ ಕುಮಾರಸ್ವಾಮಿ ಅವರು. ಅವರ ಮೇಲೆ ಆರೋಪ ಮಾಡಬೇಡಿ. ಕುಮಾರಸ್ವಾಮಿ ಅವರು ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ'' ಎಂದು ಅವರು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News