ಕರ್ನಾಟಕದ ಯಾರೊಬ್ಬರೂ ಹಸಿದು ಮಲಗಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2023-07-10 10:11 GMT

ಬೆಂಗಳೂರು:  ನಾನು ನನ್ನ ಬದುಕಿನಲ್ಲಿ ಅನುಭವಿಸಿದ ಹಸಿವು, ಬಡತನದ ಅನುಭವದಿಂದಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ 'ಅನ್ನಭಾಗ್ಯ' ಯೋಜನೆಯನ್ನು ಜಾರಿಗೆ ತರುವ ನಿರ್ಧಾರ ಕೈಗೊಂಡಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 ಅನ್ನಭಾಗ್ಯ ಯೋಜನೆ ಹತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಯಾರೊಬ್ಬರೂ ಹಸಿದು ಮಲಗಬಾರದು ಎಂಬ ಸದಾಶಯದೊಂದಿಗೆ ಬಡಕುಟುಂಬಗಳಿಗೆ ತಲಾ 5 ಕೆ.ಜಿ ಆಹಾರಧಾನ್ಯವನ್ನು ವಿತರಣೆ ಮಾಡುವ ಯೋಜನೆಯನ್ನು 10 ಜುಲೈ 2013 ರಂದು ಜಾರಿಗೊಳಿಸಿ, ನಾಡಿನ ಹಸಿದವರಿಗೆ ನೆಮ್ಮದಿಯ ಅನ್ನ ನೀಡಿದ್ದೆ. ನಮ್ಮ ಈ ಯೋಜನೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಲವು ಆರ್ಥಿಕ- ಸಾಮಾಜಿಕ ಸಂಸ್ಥೆಗಳು ಮತ್ತು ಸರ್ಕಾರಗಳು ಶ್ಲಾಘಿಸಿವೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ ಎಂದು ಹೇಳಿದ್ದಾರೆ.

ನಾಡಿನ ಜನತೆ ವಿಶ್ವಾಸವಿರಿಸಿ ನೀಡಿದ್ದ ರಾಜಕೀಯ ಅಧಿಕಾರವನ್ನು ಕರ್ನಾಟಕವನ್ನು ಹಸಿವು ಮುಕ್ತಗೊಳಿಸಲು ಸದ್ಬಳಕೆ ಮಾಡಿಕೊಂಡ ಸಂತೃಪ್ತಿ ನನ್ನದು ಎಂದಿದ್ದಾರೆ.

ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಮತ್ತಿತರ ಉಪಕ್ರಮಗಳ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ.2013 ರಿಂದ ಅನ್ನ ಭಾಗ್ಯವು 4 ಕೋಟಿಗೂ ಹೆಚ್ಚು ಜನರಿಗೆ ಆಹಾರ ಭದ್ರತೆಯನ್ನು ಖಾತ್ರಿಪಡಿಸುತ್ತಿದೆ ಎಂದೂ ಟ್ವೀಟ್ ಮೂಲಕ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News