ಬಿಸಿಯೂಟ ನೌಕರರಿಗೆ ಬಳೆ ತೊಡದಂತೆ ಆದೇಶ ಹೊರಡಿಸಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Update: 2023-07-16 13:48 GMT

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ತಯಾರಿ ಸಿಬ್ಬಂದಿಗಳು ಕೈಗೆ ಬಳೆತೊಡದಂತೆ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ ಎಂಬ ಸುದ್ದಿಗೆ ಸಂಬಂಧಿಸಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ ಎನ್ನುವ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ವಾಸ್ತವದಲ್ಲಿ ಕೇಂದ್ರ ಸರ್ಕಾರ ಪೋಷಣ್ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿ, ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿದೆ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಬಿಸಿಯೂಟ ಕಾರ್ಯಕರ್ತೆಯರು ಬಳೆ ತೊಡಬಾರದೆಂದು ಹೇಳಿ ಕಾಂಗ್ರೆಸ್‌ ಸರ್ಕಾರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಲಾಗಿತ್ತು. ಇದೀಗ, ಮುಖ್ಯಮಂತ್ರಿ ಕಛೇರಿಯಿಂದಲೇ ಅಧಿಕೃತ ಸುದ್ದಿ ಹೊರಬಿದ್ದಿದ್ದು, ಅಂತಹ ಯಾವುದೇ ಆದೇಶಗಳನ್ನು ಪ್ರಕಟಿಸಿಲ್ಲ ಎಂದು ಸ್ಪಷ್ಟನೆ ಸಿಕ್ಕಿದೆ.

‘ತಮ್ಮದೇ ಸರಕಾರ ರೂಪಿಸುವ ನೀತಿ ನಿಯಮಗಳ ಬಗ್ಗೆ ಅರಿವಿಲ್ಲದ ನಳಿನ್ ಕುಮಾರ್ ಅವರು ಸಂಸದ ಸ್ಥಾನಕ್ಕೆ ಅಪಚಾರವಿದ್ದಂತೆ. ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಬಿಸಿಯೂಟದ ಕಾರ್ಯಕರ್ತೆಯರು ಅಡುಗೆ ಮಾಡುವ ಸಂದರ್ಭದಲ್ಲಿ ಕೈಗೆ ಉಗುರುಬಣ್ಣ ಹಚ್ಚಬಾರದು, ಬಳೆ ತೊಟ್ಟಿರಬಾರದು ಎಂದು ಕೇಂದ್ರ ಸರಕಾರ-2020ರಲ್ಲೆ ಆದೇಶ ಹೊರಡಿಸಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ನಳಿನ್ ಕುಮಾರ್ ಕಟೀಲ್ ಅವರೇ, ಆ ಬಳೆಯನ್ನು ತಾವು ಧರಿಸಿಕೊಳ್ಳಲೆಂದು ಮೋದಿಯವರು ಈ ಆದೇಶ ಹೊರಡಿಸಿದ್ದೇ? ಹಿಂದೂ ಆಚರಣೆಗಳನ್ನು ಹತ್ತಿಕ್ಕಲು ಈ ಕ್ರಮ ಕೈಗೊಂಡರೇ? ನಳಿನ್ ಕುಮಾರ್ ಕಟೀಲ್ ಕೈಗೆ ಬಳೆ ತೊಟ್ಟು ಇದನ್ನು ಪ್ರತಿಭಟಿಸಲಿ’ ಎಂದು ಕಾಂಗ್ರೆಸ್ ಇದೇ ವೇಳೆ ಲೇವಡಿ ಮಾಡಿದೆ.

‘ಹಿಂದೂಗಳ ವಿರುದ್ಧ ಸದಾ ವಿಷಕಾರುವ ಕಾಂಗ್ರೆಸ್ ಸರಕಾರದಿಂದ ಮತ್ತೊಂದು ದ್ವೇಷದ ಆದೇಶ ಹೊರಬಿದ್ದಿದೆ. ‘ಬಿಸಿಯೂಟ ಅಡುಗೆದಾರರು’ ಕೈಗೆ ಬಳೆ ಧರಿಸಬಾರದು ಎಂದಿರುವ ಕಾಂಗ್ರೆಸಿಗರು ಆ ಬಳೆಗಳನ್ನು ತಾವು ಧರಿಸಿಕೊಳ್ಳಬೇಕೆಂದಿದ್ದಾರೆಯೇ? ಎಂಬುದೇ ತಿಳಿಯುತ್ತಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News