ವಿಧಾನಸಭೆಯ ಸಭಾಂಗಣದಲ್ಲಿನ ಸಾವರ್ಕರ್ ಭಾವಚಿತ್ರ ತೆರವು ಸಂಬಂಧ ಯಾವುದೇ ಪ್ರಸ್ತಾವ ಬಂದಿಲ್ಲ: ಸ್ಪೀಕರ್ ಖಾದರ್
ಬೆಳಗಾವಿ (ಸುವರ್ಣ ವಿಧಾನಸೌಧ): ವಿಧಾನಸಭೆಯ ಸಭಾಂಗಣದಲ್ಲಿನ ಸಾವರ್ಕರ್ ಭಾವಚಿತ್ರ ತೆರವು ಮಾಡುವ ಸಂಬಂಧ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಸ್ಪೀಕರ್ ಯು.ಟಿ. ಖಾದರ್ ಅವರು ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಸಾವರ್ಕರ್ ಭಾವಚಿತ್ರ ತೆರವುಗೊಳಿಸಲು ಪ್ರಸ್ತಾವ ಬಂದರೆ ಆಗ ಪರಿಶೀಲನೆ ನಡೆಸಬಹುದು. ಆದರೆ, ಎಲ್ಲೋ ಬಾಲ್ ಬರುತ್ತೇ ಎಂದು ಈಗಲೇ ಬ್ಯಾಟ್ ಬೀಸಿದರೆ ಆಗುತ್ತಾ? ಸಂವಿಧಾನ ಬದ್ಧವಾಗಿ ಏನು ಮಾಡಬೇಕು ಅದನ್ನು ಮಾಡುತ್ತೇನೆ" ಎಂದು ಸ್ಪಷಣೆ ನೀಡಿದರು.
"ನನಗೆ ಸಚಿವರೂ, ಪ್ರತಿಪಕ್ಷದವರೂ ಎಂಬ ಬೇಧವಿಲ್ಲ. ಎಲ್ಲರೂ ಒಂದೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಹೇಳಿಕೆ ನೀಡಲು ಎಲ್ಲರಿಗೂ ಅವಕಾಶವಿದೆ. ಯಾವುದೇ ವಿಚಾರವಿದ್ದರೂ ಸಂವಿಧಾನ ಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತೇನೆ" ಎಂದು ಅವರು ವಿವರಣೆ ನೀಡಿದರು.
ವಿಧಾನಸಭೆ ಸಭಾಂಗಣದ ಒಳಗೆ ಮೇಲ್ಭಾಗದಲ್ಲಿ ಬಸವಣ್ಣನ ಪೋಟೋ, ಕೆಳಗೆ ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧಿ, ವಲ್ಲಭಭಾಯಿ ಪಟೇಲ್ ಭಾವಚಿತ್ರಗಳ ಜೊತೆಗೆ ಸಾವರ್ಕರ್ ಭಾವಚಿತ್ರವನ್ನು 2022ರ ಡಿಸೆಂಬರ್ 19ರಂದು ಅಂದಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಬಿಜೆಪಿ ಸರಕಾರ ಅನಾವರಣಗೊಳಿಸಿತ್ತು.