ಶಕ್ತಿ ಯೋಜನೆ ಪರಿಷ್ಕರಿಸುವ ಪ್ರಸ್ತಾವ ಸರಕಾರದ ಮುಂದೆ ಇಲ್ಲ : ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಸರಕಾರದ ಮುಂದೆ ಮಹಿಳೆಯರಿಗೆ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ ಯೋಜನೆ’ ಪರಿಷ್ಕರಿಸುವ ಯಾವುದೇ ಪ್ರಸ್ತಾಪವೂ ಇಲ್ಲ, ಉದ್ದೇಶವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಕ್ತಿ ಯೋಜನೆ ಪರಿಷ್ಕರಣೆ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದು, ಸರಕಾರದ ಮುಂದೆ ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಯೋಚನೆಯಿಲ್ಲ. ಕೆಲ ಮಹಿಳೆಯರು ಹೇಳುತ್ತಿದ್ದಾರೆಂದು ಶಿವಕುಮಾರ್ ಹೇಳಿದ್ದಾರೆ. ಅದು ನನಗೆ ಗೊತ್ತಿಲ್ಲ. ಆ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ ಎಂದು ವಿವರಣೆ ನೀಡಿದರು.
ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಶಕ್ತಿ ಯೋಜನೆ ಸೇರಿದಂತೆ ನಮ್ಮ ಸರಕಾರ ಜಾರಿಗೆ ತಂದಿರುವ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ತಿರುಚಲಾಗಿದೆ’ ಎಂದು ಸ್ಪಷ್ಟನೆ ಕೊಟ್ಟರು.
‘ಶಕ್ತಿ ಯೋಜನೆ ಮರುಪರಿಶೀಲನೆ ಹೇಳಿಕೆಗೆ ಸಂಬಂಧಿಸಿದಂತೆ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಆರ್ಥಿಕವಾಗಿ ಸದೃಢವಾಗಿರುವವರು, ಐಟಿ-ಬಿಟಿ ಸಂಸ್ಥೆಗಳವರು, ಎಂಎನ್‍ಸಿ ಕಂಪೆನಿಗಳ ಸಿಬ್ಬಂದಿ ಸೇರಿದಂತೆ ಅನೇಕ ಮಹಿಳೆಯರು ತಮಗೆ ಬಸ್‍ಗಳಲ್ಲಿ ಉಚಿತ ಪ್ರಯಾಣದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಾನು ಸಚಿವರ ಜತೆ ಚರ್ಚೆ ಮಾಡುತ್ತೇನೆಂದು ಹೇಳಿದ್ದೇನೆ ಅಷ್ಟೇ. ಯೋಜನೆ ನಿಲ್ಲಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಡಿ.ಕೆ.ಶಿವಕುಮಾರ್ ವಿವರಣೆ ನೀಡಿದರು.