ವಿಧಾನ ಪರಿಷತ್ತಿನ 3 ಸ್ಥಾನಗಳಿಗೆ ನಾಮನಿರ್ದೇಶನ | ರಾಜಭವನಕ್ಕೆ ಯಾವುದೇ ಶಿಫಾರಸ್ಸನ್ನು ಕಳುಹಿಸಿಲ್ಲ: ಸಲೀಂ ಅಹ್ಮದ್
ಬೆಂಗಳೂರು, ಆ. 6: ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಕಚೇರಿಯ ವರೆಗೂ ಮಾತ್ರವೇ, ರಾಜಭವನಕ್ಕೆ ಈವರೆಗೂ ಯಾವುದೇ ಶಿಫಾರಸ್ಸನ್ನು ಕಳುಹಿಸಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ರವಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಮುಂಬರುವ ಲೋಕಾಸಭೆ ಚುನಾವಣೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ನಡೆದ ಅಲ್ಪಸಂಖ್ಯಾತ ಸಮುದಾಯದ ಮುಖಂಡರುಗಳ ಸಭೆಯ ಬಳಿಕ ಮಾತನಾಡಿದ ಅವರು, ಖಾಸಗಿ ವ್ಯಕ್ತಿಗಳು ನೀಡಿದ ದೂರಿನ ಆಧಾರದ ಮೇಲೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದಾರೆಂದು ವರದಿಯಾಗಿರುವುದನ್ನು ಗಮನಿಸಿದ್ದೇನೆ. ಆದರೆ ಈವರೆಗೂ ಶಿಫಾರಸ್ಸನ್ನೇ ಕಳುಹಿಸಿಲ್ಲ ಎಂದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ರಾಜಕೀಯ ಮೈತ್ರಿಕೂಟ ಗೆಲುವು ಸಾಧಿಸಲಿದೆ. ರಾಹುಲ್ ಗಾಂಧಿ ಈ ದೇಶದ ಪ್ರಧಾನಿಯಾಗಲಿದ್ದಾರೆ. ಅಲ್ಲದೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯಗಳನ್ನು ಮುಂದಿನ ಆರು ತಿಂಗಳ ಕಾಲ ರಾಜ್ಯದ ಮನೆ ಮನೆಗೆ ತಲುಪಿಸಲು ಕಾಂಗ್ರೆಸ್ ಅಭಿಯಾನ ನಡೆಸಲಿದೆ ಎಂದ ಅವರು, ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಯಾವ ಸಾಧನೆಗಾಗಿ ಜನ ಬಿಜೆಪಿಗೆ ಮತ ಹಾಕಬೇಕು ಎಂದು ಪ್ರಶ್ನಿಸಿದರು.
ಕಳೆದ 9 ವರ್ಷಗಳಿಂದಲೂ ಸುಳ್ಳುಗಳನ್ನು ಹೇಳಿಕೊಂಡೇ ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ನೂರು ದಿನಗಳಲ್ಲಿ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ತಿಳಿಸಿದ್ದರು. ರೈತರ ಆದಾಯವನ್ನು ದ್ವಿಗುಣಗೊಳ್ಳಿಸುತ್ತೇವೆ ಎಂದು ಹೇಳಿದ್ದರು. ಆದರೆ, ಖಾತೆಗೆ ಹಣವೂ ಬಂದಿಲ್ಲ, ಉದ್ಯೋಗ ಸೃಷ್ಟಿಯೂ ಆಗಿಲ್ಲ, ಕೃಷಿಕರ ಆದಾಯ ಎಷ್ಟಿದೆ ಎಂಬುದು ಈಗ ನಮ್ಮ ಕಣ್ಣೆದುರೇ ಇದೆ ಎಂದು ಅವರು ವಾಗ್ದಾಳಿ ನಡೆಸಿದರು.