ವಿಧಾನ ಪರಿಷತ್‌ ಗೆ ಸುಧಾಮ್ ದಾಸ್ ನಾಮ ನಿರ್ದೇಶನಕ್ಕೆ ಆಕ್ಷೇಪ: ಖರ್ಗೆಗೆ ಪತ್ರ ಬರೆದ ನಾಲ್ವರು ಸಚಿವರು

Update: 2023-08-19 08:06 GMT

ಸುಧಾಮ್ ದಾಸ್ - ಒಳ ಚಿತ್ರದಲ್ಲಿ

ಬೆಂಗಳೂರು, ಆ.18: ಮಾಜಿ ಈಡಿ(ಜಾರಿ ನಿರ್ದೇಶನಾಲಯ) ಅಧಿಕಾರಿ ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ಆಕ್ಷೇಪ ವ್ಯಕ್ತಪಡಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿ ನಾಲ್ವರು ಸಚಿವರು ಪತ್ರ ಬರೆದಿದ್ದಾರೆ.

ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಎಚ್.ಸಿ.ಮಹದೇವಪ್ಪ, ಹಾಗೂ ಆರ್.ಬಿ.ತಿಮ್ಮಾಪುರ ಅವರು ಪತ್ರ ಬರೆದಿದ್ದು, ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷ ಸೇರಿರುವ ಸುಧಾಮ್ ದಾಸ್ ಅವರನ್ನು ಪರಿಷತ್ ನಾಮನಿರ್ದೇಶನಕ್ಕೆ ಪರಿಗಣಿಸಬೇಡಿ. ಮೇಲ್ಮನೆಗೆ ನಾಮರ್ನಿರ್ದೇಶನ ಹೆಸರು ಅಂತಿಮಗೊಳಿಸುವ ಮುನ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ,ಈವರೆಗೆ ರಾಜ್ಯ ನಾಯಕರಾಗಲಿ, ಹೈಕಮಾಂಡ್ ಆಗಲಿ ಈ ಸಂಬಂಧ ನಮ್ಮ ಬಳಿ ಚರ್ಚೆ ನಡೆಸಿಲ್ಲ. ನಮಗೆ ಬಹಳ ಬೇಜಾರಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಾಮನಿರ್ದೇಶಿತ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಾದೇಶಿಕ ಸಮತೋಲನ ಹಾಗೂ ಸಾಮಾಜಿಕ ನ್ಯಾಯವನ್ನು ಅನುಸರಿಸಬೇಕು. ಅಚ್ಚರಿಯ ಕಾರಣಕ್ಕಾಗಿ ಸುಧಾಮ್ ದಾಸ್ ಕೆಲವು ವರ್ಷಗಳ ಹಿಂದೆ ಜಾರಿ ನಿರ್ದೇಶನಾಲಯದಿಂದ (ಈಡಿ) ರಾಜೀನಾಮೆ ನೀಡಿದ್ದರು. ಬಳಿಕ ಕರ್ನಾಟಕ ಮಾಹಿತಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಮಾರ್ಚ್ 2023ಗೆ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇತ್ತೀಚೆಗಷ್ಟೇ ಪಕ್ಷ ಸೇರಿಸುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಅವರ ಕೊಡುಗೆ ಏನೂ ಇಲ್ಲ ಎಂದು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಈ ವ್ಯಕ್ತಿ ಮೇಲ್ಮನೆ ನಾಮನಿರ್ದೇಶಿತರಾಗುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಹಾಗಾಗಿ ಅವರ ಹೆಸರನ್ನು ಕೈ ಬಿಡಬೇಕು ಎಂದು ನಿಮ್ಮಲ್ಲಿ ಮನವಿ ಮಾಡುತ್ತೇವೆ. ಕಾಂಗ್ರೆಸ್‍ಗೆ ನಿಷ್ಠರಾಗಿರುವ ಹಾಗೂ ಹಲವು ವರ್ಷಗಳಿಂದ ಪಕ್ಷಕ್ಕೆ ದುಡಿಯುತ್ತಿರುವವರನ್ನು ಆಯ್ಕೆ ಮಾಡುವಂತೆ ಪತ್ರದ ಮೂಲಕ ಸಚಿವರು ಒತ್ತಾಯಿಸಿದ್ದಾರೆ.

30 ವರ್ಷಗಳ ಕಾಲದಿಂದ ಕೆಲಸ ಮಾಡಿದ ದಲಿತ ನಾಯಕರಿಗೆ ಅವಕಾಶ ನೀಡಲಿ ಎಂಬುದಷ್ಟೇ ನಮ್ಮ ಸಲಹೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಪತ್ರ ಬರೆದಿರುವುದು ಸತ್ಯ. ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ. ಹೈಕಮಾಂಡ್ ನಾಯಕರ ನಿರ್ಧಾರ ಮುಖ್ಯ.

-ಕೆ.ಎಚ್.ಮುನಿಯಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ




 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News