ಓಲಾ, ಉಬರ್ ಆಟೊ ಸೇವೆ ವಿವಾದ: ನಿಯಮ ರೂಪಿಸದ ಬಗ್ಗೆ ಪ್ರಶ್ನಿಸಿದ ಹೈಕೋರ್ಟ್

Update: 2023-08-17 13:58 GMT

ಬೆಂಗಳೂರು, ಆ.16: ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪೆನಿಗಳು ಕಲ್ಪಿಸಿರುವ ಆಟೋ ರಿಕ್ಷಾ ಸೇವೆಗೆ ಸಂಬಂಧಿಸಿದಂತೆ ಇನ್ನೂ ನಿಯಮಗಳನ್ನು ಏಕೆ ರೂಪಿಸಿಲ್ಲ ಎಂದು ರಾಜ್ಯ ಸರಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ.

ಆ್ಯಪ್ ಆಧಾರಿತ ಓಲಾ ಮತ್ತು ಉಬರ್ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂಬ ರಾಜ್ಯ ಸರಕಾರದ ಆದೇಶ ರದ್ದುಪಡಿಸಬೇಕು ಎಂದು ಓಲಾ, ಉಬರ್ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ರಾಜ್ಯ ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು, ಆಟೋ ಟ್ಯಾಕ್ಸಿಗೆ ಪರವಾನಗಿ ಪಡೆಯದೇ ದರ ನಿಗದಿಪಡಿಸಲಾಗದು. ಈ ಸಂಬಂಧ ರಾಜ್ಯ ಸರಕಾರವು ನಿಯಮಗಳನ್ನು ರೂಪಿಸಲಿದೆ. ಆನಂತರ ಪರವಾನಗಿ ಪಡೆದು ಸೇವೆ ನೀಡಬೇಕು. ಆಟೊ ಟ್ಯಾಕ್ಸಿ ಸೇವೆಗೆ ಓಲಾ ಮನವಿ ಸಲ್ಲಿಸಿದೆ. ಆದರೆ, ಉಬರ್ ಮನವಿಯನ್ನೂ ನೀಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಆಗ ನ್ಯಾಯಪೀಠವು ಇನ್ನು ಏಕೆ ನಿಯಮ ರೂಪಿಸಿಲ್ಲ. ಶೇ.5ರಷ್ಟು ಸೇವಾ ಶುಲ್ಕವನ್ನು ಯಾವ ಆಧಾರದಲ್ಲಿ ನಿಗದಿಪಡಿಸಲಾಗಿದೆ ಎಂದು ಪ್ರಶ್ನಿಸಿತು. ಇದಕ್ಕೆ ಎಜಿ ಅವರು ನಿಯಮ ರೂಪಿಸುವ ಪ್ರಕ್ರಿಯೆ ಪರಿಗಣನೆಯಲ್ಲಿದೆ. ಮೋಟಾರು ವಾಹನ ಕಾಯಿದೆ ಸೆಕ್ಷನ್ 167ರ ಅಡಿ ದರ ನಿಗದಿ ಮಾಡುವ ಹಕ್ಕು ರಾಜ್ಯ ಸರಕಾರಕ್ಕೆ ಇದೆ. ಸಂಬಂಧಿತ ಎಲ್ಲರ ಜೊತೆ ಚರ್ಚಿಸಿ ದರ ನಿಗದಿಪಡಿಸಲಾಗಿದೆ ಎಂದರು.

ಮುಂದುವರಿದು, ಎಜಿ ಅವರು, ನೀತಿ ರೂಪಿಸುವವರೆಗೆ ಕಾರ್ಯನಿರ್ವಹಿಸಲು ಓಲಾ, ಉಬರ್‍ಗೆ ಅವಕಾಶ ನೀಡಲಾಗದು. ಪರವಾನಗಿ ಕೋರಿ ಅರ್ಜಿ ಸಲ್ಲಿಸಲು ಯಾವುದೇ ನೀತಿ ಇಲ್ಲ. ಪರವಾನಗಿ ಪಡೆಯದೇ ಆಟೊ ಸೇವೆ ನೀಡಲಾಗದು. ಅನುಮತಿ ಇಲ್ಲದಿರುವುದು ಮತ್ತು ಪರವಾನಗಿಯೇ ಇಲ್ಲದಿರುವಾಗ ದರ ನಿಗದಿಪಡಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಆ.23ಕ್ಕೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News