ಪಕ್ಷಕ್ಕೆ ದುಡಿದ ಎಲ್ಲರಿಗೂ ಅವಕಾಶ, ಇದು ಹೈಕಮಾಂಡ್ ಸೂತ್ರ: ಡಿಸಿಎಂ ಡಿ.ಕೆ ಶಿವಕುಮಾರ್

Update: 2024-01-28 06:29 GMT

ಬೆಂಗಳೂರು "ಪಕ್ಷಕ್ಕೆ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೆ ಅಧಿಕಾರ ಸಿಗಲಿ ಎಂದು ನಿಗಮ ಮಂಡಳಿಗಳಿಗೆ ಎರಡು ವರ್ಷ ಅವಧಿಯ ಸೂತ್ರವನ್ನು ಹೈಕಮಾಂಡ್ ಮಾಡಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಕ್ಷದ ಎಲ್ಲರಿಗೂ ಅವಕಾಶ ದೊರೆಯಬೇಕು. ಇತರರಿಗೂ ಅಧಿಕಾರ ಹಂಚಬೇಕು. ಆದ ಕಾರಣ 2 ವರ್ಷ ಮಾತ್ರ ಅಧಿಕಾರವಧಿ ಎಂದು ಹೇಳಿದ್ದೇವೆ"  ಎಂದರು.

ಹೈಕಮಾಂಡ್ ಕೊಟ್ಟಿರುವ ಸೂತ್ರವನ್ನು ನಾವು ಜಾರಿಗೆ ತಂದಿದ್ದೇವೆ. ಇಲ್ಲಿ ಸಿದ್ದರಾಮಯ್ಯ ಅವರದ್ದು ಏನೂ ಇಲ್ಲ, ಡಿ.ಕೆ.ಶಿವಕುಮಾರ್ ಅವರದ್ದೂ ಏನೂ ಇಲ್ಲ. ಪಕ್ಷ ಅಧಿಕಾರಕ್ಕೆ ಬರಲು ಸಾಕಷ್ಟು ಕಾರ್ಯಕರ್ತರು ದುಡಿದಿದ್ದಾರೆ. ಆದ ಕಾರಣ ಎಲ್ಲರಿಗೂ ಅವಕಾಶ ನೀಡಬೇಕು ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಯ ಬಗ್ಗೆ ಕೇಳಿದಾಗ, "ಕರ್ನಾಟಕದಲ್ಲಿ 224 ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ ಏನಾಯಿತು?. ಬಿಜೆಪಿಯವರು ಲೋಕಸಭೆಯ 543 ಸ್ಥಾನಗಳನ್ನೂ ಗೆಲ್ಲಲಿ. ಬೇಡ ಎಂದವರು ಯಾರು? ವಿಧಾನಸಭಾ ಚುನಾವಣೆಯಲ್ಲಿ ನಾವು 136- 140 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದೆವು. ಅವರು 224 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರು. ಆನಂತರ ಏನಾಯಿತು? ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News