ವಿಪಕ್ಷ ನಾಯಕನನ್ನು ನೋಡುವ ನಮ್ಮ ಆಸೆ ಈಡೇರುತ್ತದೆಯೋ ಇಲ್ಲವೋ?: ಕಾಂಗ್ರೆಸ್ ಲೇವಡಿ

Update: 2023-07-01 12:32 GMT

ಬೆಂಗಳೂರು, ಜು. 1: ‘ಚುನಾವಣೆ ಮುಗಿದು 50ಕ್ಕೂ ಹೆಚ್ಚು ದಿನ ಕಳೆಯಿತು. ನಮ್ಮ ಸರಕಾರ ರಚನೆ ಆಗಿ ತಿಂಗಳು ಕಳೆಯಿತು. ಪ್ರಜಾಪ್ರಭುತ್ವದ ಸೌಂದರ್ಯಕ್ಕಾಗಿ ಸಮರ್ಥ ವಿಪಕ್ಷ ನಾಯಕನನ್ನು ಎದುರು ನೋಡುತ್ತಿದ್ದೇವೆ. ನಮ್ಮ ಆಸೆ ಈಡೇರುತ್ತದೋ ಇಲ್ಲವೋ ಗೊತ್ತಿಲ್ಲ’ ಎಂದು ಕಾಂಗ್ರೆಸ್  ಲೇವಡಿ ಮಾಡಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮಂತ್ರಿ ಮಂಡಲವೂ ರಚನೆಯಾಯ್ತು. ಸರಕಾರ ಕೆಲಸ ಶುರು ಮಾಡಿಯಾಯ್ತು. ಹಲವು ಕ್ಯಾಬಿನೆಟ್ ಸಭೆಗಳಾದವು, ಹಲವು ತೀರ್ಮಾನಗಳಾದವು. ಮೂರು ಗ್ಯಾರಂಟಿಗಳೂ ಜಾರಿಯಾದವು. ಇಷ್ಟೆಲ್ಲಾ ಆದರೂ ಬಿಜೆಪಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗಿಲ್ಲ. ಬಿಜೆಪಿ ಆಡಳಿತ ಮಾಡಲು ಆಸಮರ್ಥರು ಎಂದು ಈಗಾಗಲೇ ಜನರು ಸರ್ಟಿಫಿಕೇಟ್ ಕೊಟ್ಟಾಗಿದೆ, ಈಗ ವಿಪಕ್ಷವಾಗಿರಲೂ ಆಸಮರ್ಥರು ಎಂದು ತಿಳಿಯುತ್ತಿದೆ’ ಎಂದು ಟೀಕಿಸಿದೆ.

‘ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ. ಸಂವಿಧಾನವನ್ನು ತಿಳಿದವರು, ಪ್ರಜಾಪ್ರಭುತ್ವವನ್ನು ಅರಿತವರು ನಾಯಕರೊಬ್ಬರು ಬೇಕಾಗಿದ್ದಾರೆ. ಸಿಡಿಗೆ ತಡೆಯಜ್ಞೆ ತರದವರು, ಭ್ರಷ್ಟಾಚಾರಿಯಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ಆರೆಸೆಸ್ಸ್ ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು, ಸುಳ್ಳು ಹೇಳಬಾರದು. ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ಸರಕಾರ ಹಾಗೂ ಆಡಳಿತ ನಡೆಸುವವರು ಮಾತೃಹೃದಯದಿಂದ ಕೆಲಸ ಮಾಡಬೇಕು ಎನ್ನುತ್ತಾರೆ. ಸರಕಾರದ ಮೇಲೆ ನಿರೀಕ್ಷೆ, ಭರವಸೆ ಇಟ್ಟು ಬರುವ ಜನರ ನೋವಿಗೆ, ಅವರ ಕಷ್ಟಕ್ಕೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಸರಕಾರದ್ದಾಗಿರಬೇಕು. ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಕಳೆದ ವರ್ಷ ವಿಕೃತನೊಬ್ಬನಿಂದ ಆಸಿಡ್ ದಾಳಿಗೆ ತುತ್ತಗಿದ್ದ ಯುವತಿಯ ಉದ್ಯೋಗದ ಸಮಸ್ಯೆ ಗಮನಕ್ಕೆ ಬಂದ ತಕ್ಷಣವೇ ಸಿಎಂ ಸಿದ್ದರಾಮಯ್ಯ ಅವರು ಆ ಯುವತಿಗೆ ಸಿಎಂ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗ ಒದಗಿಸಿ ನೆರವು ನೀಡಿದ್ದಾರೆ. ಈ ಹಿಂದೆ ಸಿಎಂ ಆಗಿದ್ದ ಬೊಮ್ಮಯಿಯವರಲ್ಲಿ ಇದೇ ಯುವತಿಯ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಇದೇ ಕಾಂಗ್ರೆಸ್‍ಗೂ ಬಿಜೆಪಿಗೂ ಇರುವ ವ್ಯತ್ಯಾಸ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News